ನಿಂತಿದ್ದ ರೈಲಿನಲ್ಲಿ ಮತ್ತೆ ನಮಾಜ್, ಮತ್ತೆ ಶುರುವಾದ ವಿವಾದ !
ಉತ್ತರ ಪ್ರದೇಶದಲ್ಲಿ ನಿಂತಿದ್ದ ರೈಲಿನ ಕಂಪಾರ್ಟ್ಮೆಂಟ್‍ನೊಳಗೆ ಕೆಲವರು ಸಾರ್ವಜನಿಕವಾಗಿ ನಮಾಜ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿದೆ.ಮೊದಲೇ ಶುರುವಾಗಿ ಕೊನೆಗೊಂಡಿದ್ದ ವಿವಾದ,ಇದೀಗ ಮತ್ತೆ ಅಂತಹದೇ ವಿವಾದ ಭುಗಿಲೆದ್ದಿದೆ.ಈ ವಿಷಯವಾಗಿ ರಾಜ್ಯ ಪೊಲೀಸ್ ಹಾಗೂ ರೈಲ್ವೇ ರಕ್ಷಣಾಪಡೆ ತನಿಖೆ ನಡೆಸುತ್ತಿದೆ.
ಖಡ್ಡಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಸತ್ಯಾಗ್ರಹ ಎಕ್ಸ್ ಪ್ರೆಸ್ ರೈಲಿನಲ್ಲಿ ನಾಲ್ವರು ಮುಸ್ಲಿಮರು ನಮಾಜ್ ಮಾಡುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ರೈಲಿನೊಳಗೆ ತಮ್ಮ ಸೀಟಿನ ಹುಡುಕಾಟದಲ್ಲಿ ತಲ್ಲೀನರಾಗಿದ್ದ ಇತರ ಪ್ರಯಾಣಿಕರನ್ನು ಬದಿಯಲ್ಲಿ ಕುಳಿತಿದ್ದ ಒಬ್ಬ ಮುಸ್ಲಿಂ ವ್ಯಕ್ತಿ ತಡೆದು, ನಮಾಜ್ ಮುಗಿಯುವವರೆಗೆ ಕಾಯುವಂತೆ ಹೇಳಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು ತೀವ್ರ ಚರ್ಚೆಯ ವಿಷಯವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ನಮಾಜ್ ಮಾಡುವುದಕ್ಕೆ ಬಲಪಂಥೀಯ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.
ಈ ವರ್ಷದ ಆರಂಭದಲ್ಲಿ ಹರಿಯಾಣದ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡಿದ್ದಕ್ಕೆ ವಿವಾದ ಭುಗಿಲೆದ್ದಿತ್ತು. ಇದನ್ನು ವಿರೋಧಿಸಿ ಹಿಂದೂ ಸಂಘಟನೆಯ ಗುಂಪುಗಳು ಆ ಸ್ಥಳದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.ಆ ಸಮಯದಲ್ಲಿ ಪರಿಸ್ಥಿತಿ ಘರ್ಷಣೆಗೆ ತಿರುಗದಂತೆ ತಡೆಯಲು ಪೊಲೀಸರು ಹರಸಾಹಸಪಟ್ಟಿದ್ದರು.