ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ
ರಿಶಿ ಸುನಕ್ ಅವರನ್ನು ಯುನೈಟೆಡ್ ಕಿಂಗ್ಡಮ್ನ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸೋಮವಾರ ಆಯ್ಕೆ ಮಾಡಲಾಗಿದೆ. ಅವರ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 100 ಸಂಸದರ ಬೆಂಬಲವನ್ನು ಗಳಿಸಲು ವಿಫಲರಾಗಿದ್ದರಿಂದ ಅವರು 190 ಕ್ಕೂ ಹೆಚ್ಚು ಸಂಸದರಿಂದ ಚುನಾಯಿತರಾಗಿದ್ದಾರೆ. ಕೊನೆಗೂ ರಿಷಿ ಸುನಕ್‌ಗೆ ಅವರಿಗೆ ಬ್ರಿಟನ್ ಪ್ರಧಾನಿ ಪಟ್ಟ ಒಲಿದಿದೆ. ದೀಪಾವಳಿ ದಿನವೇ ಭಾರತೀಯರಿಗೆ ಸಿಹಿ ಸುದ್ದಿ ದೊರಕಿದೆ. ಬ್ರಿಟನ್‌ನಲ್ಲಿ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ರಿಷಿ ಸುನಕ್ ಇದೀಗ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ
ಬ್ರಿಟನ್ ನ ಮಾಜಿ ಸಚಿವ 42 ರ ಹರೆಯದ ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ಡಾ.ಎನ್.ಆರ್.ನಾರಾಯಣ ಮೂರ್ತಿ ಯವರ ಅಳಿಯ. ಕೆಲ ದಿನಗಳ ಹಿಂದಷ್ಟೇ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದರು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದರು. ಇದೀಗ ಈ ಪ್ರಧಾನಿ ಪಟ್ಟ ರಿಷಿ ಸುನಕ್‌ಗೆ ಒಲಿದಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಸುನಕ್ “ನಮ್ಮ ಯುಕೆ ಅದ್ಭುತ ದೇಶ. ಅಂಥ ದೇಶಕ್ಕೆ ಈಗ ವಿತ್ತೀಯ ಬಿಕ್ಕಟ್ಟು ಕಾಡುತ್ತಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕನ ಹುದ್ದೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಿಮ್ಮ ಮುಂದಿನ ಪ್ರಧಾನಿಯಾಗಲು ಬಯಸುತ್ತೇನೆ. ನಮ್ಮ ದೇಶದ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಜತೆಗೆ ಪಕ್ಷವನ್ನೂ ಬಲಪಡಿಸುತ್ತೇನೆ, ಸದೃಢ ದೇಶ ನಿರ್ಮಾಣದ ಬಯಕೆ ಹೊಂದಿದ್ದೇನೆ’ ಎಂದು ಭಾನುವಾರ ಟ್ವೀಟ್ ಮಾಡಿದ್ದರು.