ED : ನಟಿ ಜಾಕ್ವೆಲಿನ್ ಬಗ್ಗೆ ಶಾಕಿಂಗ್ ಮಾಹಿತಿ | ಭಾರತದಿಂದ ಎಸ್ಕೇಪ್ ಆಗಲು ಪ್ರಯತ್ನ ಪಟ್ಟ ನಟಿ

ಸಾಮಾನ್ಯ ಜನರಿಗೆ ಹಣ ಸಂಪಾದಿಸಿ ಖರ್ಚು ಮಾಡೋಕೆ ನೂರು ಬಾರಿ ಯೋಚನೆ ಮಾಡಬೇಕಾಗುತ್ತದೆ. ಆದರೆ ಕೋಟಿ ಗಟ್ಟಲೆ ಹಣ ಇರುವ ಶ್ರೀಮಂತರಿಗೆ ಹಣವನ್ನು ರಕ್ಷಣೆ ಮಾಡಲು ನೂರು ರೀತಿಯ ಚಿಂತೆ ಆಗಿದೆ.

ಹಾಗೆಯೇ 200ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಭಾರತದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪಿಟಿಐ ವರದಿಯ ಪ್ರಕಾರ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಭಾರತದಿಂದ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದರು, ಆದರೆ ಲುಕ್‌ಔಟ್ ಸುತ್ತೋಲೆಯಲ್ಲಿ ಅವರ ಹೆಸರು ಇರುವುದರಿಂದ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಇಡಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಜಾಕ್ವೆಲಿನ್ ತನ್ನ ಮೊಬೈಲ್ ಫೋನ್‌ನಲ್ಲಿದ್ದ ಸಾಕ್ಷ್ಯವನ್ನು ನಾಶಮಾಡಿದ್ದಾರೆ ಎಂದು ಇಡಿ ನ್ಯಾಯಾಲಕ್ಕೆ ತಿಳಿಸಿದೆ.

ಇತ್ತೀಚೆಗೆ ಜಾಕ್ವೆಲಿನ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಅರ್ಜಿಯ ಅಂತಿಮ ವಾದಕ್ಕಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ನಟಿಗೆ ಮಧ್ಯಂತರ ಜಾಮೀನು ವಿಸ್ತರಿಸಲಾಗಿದೆ. ಆದರೆ ಜಾರಿ ನಿರ್ದೇಶನಾಲಯವು ಜಾಮೀನು ಅರ್ಜಿಯ ಪ್ರತಿಕ್ರಿಯೆಯಲ್ಲಿ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ.

ಆದರೆ ಇಡಿ ಆರೋಪಗಳನ್ನು ಜಾಕ್ವೆಲಿನ್ ಪರ ವಕೀಲರಾದ ಪ್ರಶಾಂತ್ ಪಾಟೀಲ್ ತಳ್ಳಿಹಾಕಿದ್ದಾರೆ. ಜಾಕ್ವೆಲಿನ್ ಯಾವಾಗಲೂ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಿದ್ದಾರೆ ಮತ್ತು ಇಲ್ಲಿಯವರೆಗಿನ ಎಲ್ಲಾ ಸಮನ್ಸ್‌ಗಳಿಗೂ ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ. ‘ಜಾಕ್ವೆಲಿನ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲಾ ಮಾಹಿತಿಯನ್ನು ಇಡಿಗೆ ಹಸ್ತಾಂತರಿಸಿದ್ದಾರೆ’ ಎಂದು ಜಾಕ್ವೆಲಿನ್ ಪರ ವಕೀಲರು ಹೇಳಿದರು.‌

ಆರೋಪಗಳ ಪ್ರಕಾರ ಜಾಕ್ವೆಲಿನ್‌ ಫರ್ನಾಂಡೆಸ್‌ ಸುಕೇಶ್‌ ಚಂದ್ರಶೇಖರ್‌ರಿಂದ 7 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ಪಡೆದಿದ್ದರು. ದುಬಾರಿ ಬ್ಯಾಗ್‌, ಕಾರು, ಬಟ್ಟೆಗಳು, ವಾಚ್‌ ಮತ್ತಿತರ ವಸ್ತುಗಳನ್ನೂ ಉಡುಗೊರೆಯಾಗಿ ಪಡೆದಿದ್ದರು ಎನ್ನಲಾಗಿದೆ. ಜತೆಗೆ ಸುಕೇಶ್‌ ಚಂದ್ರಶೇಖರ್‌ ಮೋಸದ ದುಡ್ಡಿನಲ್ಲಿ ಈ ಉಡುಗೊರೆಗಳನ್ನು ಕೊಡುತ್ತಿರುವುದು ಗೊತ್ತಿದ್ದರೂ ನಟಿ ಉಡುಗೊರೆ ಸ್ವೀಕರಿಸಿದ್ದರು ಎಂಬುದೇ ಅವರ ಮೇಲಿರುವ ದೊಡ್ಡ ಆರೋಪ ಆಗಿದೆ.

ಕೆಲವು ದಿನಗಳ ಹಿಂದೆ ದೆಹಲಿಯ ಪಟಿಯಾಲಾ ಕೋರ್ಟ್‌ ಜಾಕ್ವೆಲಿನ್ ಅವರಿಗೆ ಮಧ್ಯಂತರ ಜಾಮೀನು ನೀಡುವ ಮೂಲಕ ಕೊಂಚ ರಿಲೀಫ್ ಸಿಕ್ಕಿತ್ತು. ರೂ 50,000 ಭದ್ರತಾ ಬಾಂಡ್‌ ಪಡೆದು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ನ್ಯಾಯಾಂಗ ಬಂಧನದಲ್ಲೇ ಮುಂದುವರೆದಿದ್ದಾರೆ. ಸೆಪ್ಟಂಬರ್‌ನಲ್ಲಿ ಜಾಕ್ವೆಲಿನ್‌ ಫರ್ನಾಂಡೆಸ್‌ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಆಗಸ್ಟ್‌ 17ರಂದು ಸಲ್ಲಿಸಿದ್ದ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಜಾಕ್ವೆಲಿನ್‌ರನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ ಪರಿಗಣಿಸಿತ್ತು ಎಂದು ಮಾಹಿತಿ ದೊರೆತಿದೆ.

Leave A Reply

Your email address will not be published.