Kantara : ಕಾಂತಾರದ ಮೊದಲ ದೃಶ್ಯ ನಿಮಗೆ ನೆನಪಿದೆಯೇ ? ಅಮ್ಮ ತಬ್ಬಿದ ಹಾಗೆ, ಮಾವನ ಪ್ರೀತಿ ಬೇಕೆಂದು ಹೇಳವುದು ಯಾಕೆ?

ಎಲ್ಲಾ ಕಡೆ ‘ಕಾಂತಾರ’ದ್ದೇ ಸುದ್ದಿ. ಕರಾವಳಿಯ ದೈವಕೋಲದಿಂದ ಮನೆ ಮಾತಾಗಿ ದೈವದ ಆಶೀರ್ವಾದದಿಂದಲೇ ಎಲ್ಲಾ ಕಡೆ ಪ್ರಶಂಸೆ ಗಳಿಸಿ ಮುನ್ನಡೆಯುತ್ತಿದೆ. ವಿದೇಶಗಳಲ್ಲೂ ನೆಟ್ಟಿಗರು ಸಿನಿಮಾವನ್ನು ಬಹಳಷ್ಟು ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಆರಂಭದಲ್ಲಿ ಸಂಬಂಧವನ್ನು ಸುಂದರವಾಗಿ ಹೇಳಲಾಗಿದೆ. ಬನ್ನಿ ಅದೇನೆಂದು ತಿಳಿಯೋಣ!

ಈ ಸಿನಿಮಾದಲ್ಲಿ ವೈರಲ್ ಆಗಿರುವ ಒಂದು ವಿಚಾರವೆಂದರೆ ಕಾಂತಾರ ಸಿನಿಮಾದ ಆರಂಭದಲ್ಲಿ ಬರುವ ಸೀನ್‌. ‘ಅಮ್ಮ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ’ ಎಂಬ ವಿಚಾರ ಬಹಳಷ್ಟು ಜನರಲ್ಲಿ ಗೊಂದಲ ಮೂಡಿಸಿದೆ. ಅಮ್ಮ ಅಂದ್ಮೇಲೆ ಅಲ್ಲಿ ಅಪ್ಪ ಅಂತ ಹೇಳದೆ, ಮಾವ ಅಂತ ಯಾಕೆ ಹೇಳಿದರು ಎಂಬ ಪ್ರಶ್ನೆ ಎದುರಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಕಾಂತಾರಾ ಚಿತ್ರದ (Kanthara Movie) ಮೊದಲ‌ ದೃಶ್ಯ..ಕಾಡಿನ ಮಧ್ಯದಿಂದ ಇದ್ದಕ್ಕಿದ್ದಂತೆ ಗಗ್ಗರದ ಶಬ್ಧ ಕೇಳಿ ಬರೋಕೆ ಶುರುವಾಗುತ್ತೆ. ರಾಜನಿಗೆ ಆ ಶಬ್ಧ ಕೇಳಿ ಹೆದರಿಕೆ (Fear) ಆಗೋದಿಲ್ಲ, ಅಮ್ಮ (Mother) ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ ಭಾಸವಾಗುತ್ತದೆ. ಒಂದು ಕಲ್ಲಿನ ಮುಂದೆ ಬಂದು ನಿಲ್ತಾನೆ. ಅದನ್ನು ನೋಡ್ತಿದ್ದಂತೆಯೇ ರಾಜನಿಗೆ ಕಣ್ಣಲ್ಲಿ ನೀರು ಹರಿದು, ನೆಮ್ಮದಿ ನಿರಾಳತೆ ಕಾಣುತ್ತದೆ. ಅಮ್ಮ ತಬ್ಬಿಕೊಂಡ ಹಾಗೆ, ಮಾವ ತಲೆ ಸವರಿದ ಹಾಗೆ. ಈ ಸೀನಲ್ಲಿ ಈ ಡೈಲಾಗ್, ಅದೂ ಒಟ್ಟೊಟ್ಟಿಗೇ ಎರಡೆರಡು ಸಲ ರಿಪೀಟ್ ಆಗಿದೆ ಈ ಸಂಭಾಷಣೆ. ಅಮ್ಮ ಅಂತ ಹೇಳಿದ ನಂತರ ಅಪ್ಪ ಅನ್ನದೆ ಮಾವ ಎಂಬ ಮಾತು ಬರುತ್ತೆ . ಯಾಕೆ ಅಂತ ನಿಮಗೆ ಅನ್ನಿಸಿರಬಹುದು

ಇಲ್ಲಿ ಮಾವ ಅಂದರೆ ಸೋದರ ಮಾವ.(ತಾಯಿಯ ಅಣ್ಣ ಅಥವಾ ತಮ್ಮ). ಕರಾವಳಿಯವರದ್ದು(ಶೆಟ್ಟರು ಮಾತ್ರವಲ್ಲ ಬಹುಪಾಲು ಜನರದ್ದು) ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಅಂದರೆ ಮನೆಯ ಮುಖ್ಯಸ್ಥೆ ಹಾಗೂ ಸಂಪೂರ್ಣ ಉಸ್ತುವಾರಿ ತಾಯಿ ನೋಡಿಕೊಂಡರೆ, ಕುಟುಂಬದ ಯಜಮಾನ ಹಾಗೂ ಮುಖಂಡತ್ವ ತಾಯಿಯ ಅಣ್ಣ (Mothers brother) ಅಥವಾ ತಮ್ಮನಾದ ಸೋದರಮಾವನದ್ದಾಗಿರುತ್ತೆ. ಹಾಗಾಗಿ ಕುಟುಂಬದ (Family) ಯಾವುದೇ ಕಾರ್ಯಕ್ರಮವಿರಲಿ, ಕುಟುಂಬದಲ್ಲಿನ ಜಗಳ ಅಥವಾ ವ್ಯಾಜ್ಯಗಳ ಅಂತಿಮತೀರ್ಪು ಎಂದಿಗೂ ಸೋದರಮಾವ ನೀಡುವುದಾಗಿರುತ್ತದೆ. ಇದನ್ನು ಅಳಿಯ ಸಂತಾನ ಅಥವಾ ಅಳಿಯಕಟ್ಟು ಅಂತಾನೂ ಕರೀತಾರೆ. ಇಲ್ಲಿ ಮಾವ ತನ್ನ ಮಕ್ಕಳಿಗಿಂತಲೂ ಹೆಚ್ಚು ಕಾಳಜಿ ತನ್ನ ಅಕ್ಕ ಹಾಗೂ ತಂಗಿಯ ಮಕ್ಕಳಿಗೆ ನೀಡುತ್ತಾನೆ.

ನಮ್ಮ ಮಕ್ಕಳು ತಗ್ಗಿಬಗ್ಗಿ ನಡೆಯೋದು ಇಬ್ಬರಿಗೆ ಮಾತ್ರ. ಒಂದು ದೈವ, ಮತ್ತೊಂದು ಸೋದರಮಾವ ಎಂಬ ಮಾತೊಂದು ಕರಾವಳಿಯಾದ್ಯಂತ ವಾಡಿಕೆಯಲ್ಲಿದೆ.

ಇಲ್ಲಿ ತಂದೆಯ ಸ್ಥಾನ ನಾಮಕಾವಸ್ತಷ್ಟೇ ಇರುವುದು. ಆತ ಹೋದ ಮನೆಗೆ ಕೊನೆಯವರೆಗೂ ನೆಂಟನಾಗಿಯೇ ಉಳಿದುಬಿಡುತ್ತಾನೆ. ಯಾಕೆಂದರೆ ತಂದೆ (Father) ಗಿಂತಲೂ ಸೋದರಮಾವನಿಗೆ ಹೆಚ್ಚಿನ ತೂಕ. ಹಾಗಾಗಿಯೇ ಬದುಕಿದ್ದಷ್ಟೂ ದಿನ ಆತ ಸೋದರಮಾವನಾಗಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಸಾಗುವ ಕಾರಣ, ಸತ್ತ ನಂತರದಲ್ಲಿ ವಿಧಿವಿಧಾನಗಳ ಸಂಪೂರ್ಣ ಹೊಣೆಗಾರಿಕೆಯೆಲ್ಲವೂ ಆತನ ಸಹೋದರಿಯರ ಹೆಗಲಿಗೆ ಹೋಗುತ್ತದೆ. ಸತ್ತಾಗ ಆತನ ಹೆಣವೂ ಮಡದಿ ಮಕ್ಕಳಿಗೆ ಸಲ್ಲುವುದಿಲ್ಲ. ಆತನ ಸಹೋದರಿಯರಿರೋ ತವರುಮನೆಗೆ ಹೋಗುತ್ತದೆ. ಆತನ ಅಂತಿಮ ಸಂಸ್ಕಾರ, ಅಸ್ಥಿ ವಿಸರ್ಜನೆಯಂತಹ ವಿಧಿ ವಿಧಾನಗಳೆಲ್ಲವೂ ಆತನ ತವರಿನ ಮನೆಯಲ್ಲಿಯೇ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ನಂತರದಲ್ಲಿ ಹಬ್ಬ ಹರಿದಿನಗಳಾದಾಗ ಆತನಿಗೆ ಮೀಸಲು ಇಡೋ (ಆತನ ಹೆಸರಿನಲ್ಲಿ ಅಡುಗೆ ಬಡಿಸಿ ಇಡೋ), ಪ್ರತೀವರ್ಷ ಆತನ ಶ್ರಾದ್ಧ ಕಾರ್ಯ ಮಾಡೋ ಜವಾಬ್ದಾರಿ ಕೂಡಾ ಸಹೋದರಿಯರ ಜವಾಬ್ದಾರಿ.

ಎಷ್ಟು ಎಂದರೆ ಆತ ಸತ್ತಾಗ (Death) ಸೂತಕವೂ ಆತನ ಅಕ್ಕ/ತಂಗಿ ಹಾಗೂ ಅವರ ಮಕ್ಕಳಿಗೆ ಇರುತ್ತದೆಯೇ ಹೊರತು ಸತ್ತಾಗ ಆತನ ಮಡದಿ ಮಕ್ಕಳಿಗೆ ಆತನ ಸೂತಕ ಕೂಡಾ ಇರೋದಿಲ್ಲ. ಹಾಗಾಗಿ ಕರಾವಳಿಯ ಮಕ್ಕಳಿಗೆ ತೋಳು ಅಮ್ಮನದ್ದಾದರೆ, ಹೆಗಲು ಯಾವತ್ತಿಗೂ ಸೋದರ ಮಾವನದ್ದು. ಇಂತಹದ್ದೊಂದು ಆಚರಣೆ ಹಾಗೂ ಮಾವ ಅಳಿಯನ ಸಂಬಂಧದ ಅಗಾಧತೆಯನ್ನು ಈ ಸಿನಿಮಾ ಮೂಲಕ ಹೇಳಿದ್ದಾರೆ ರಿಷಬ್ ಶೆಟ್ಟಿ.

Leave A Reply

Your email address will not be published.