ರೈಲಿನಲ್ಲಿ ಹೋಗಲು ಬಂದು ಅಸ್ವಸ್ಥಗೊಂಡ ಪ್ರಯಾಣಿಕನ ಪ್ರಾಣ ಉಳಿಸಿದ ನೆಲ್ಯಾಡಿಯ ಉಪಸ್ಯಾಸಕಿ

ಮಂಗಳೂರು : ರೈಲಿನಲ್ಲಿ ಹೋಗಲು ಬಂದ ಉಪನ್ಯಾಸಕಿಯೊಬ್ಬರು ಅಸ್ವಸ್ಥಗೊಂಡ ಪ್ರಯಾಣಿಕನರೊಬ್ಬರ ಪ್ರಾಣ ಉಳಿಸಿದ ಘಟನೆ ದ.ಕ.ದಲ್ಲಿ ನಡೆದಿದೆ.

 

ಬೆಂಗಳೂರಿಗೆ ಹೊರಟಿದ್ದ ನೆಲ್ಯಾಡಿಯ ಉಪನ್ಯಾಸಕಿಯೊಬ್ಬರು ತಾವು ತೆರಳಬೇಕಿದ್ದ ರೈಲನ್ನು ಬಿಟ್ಟು ಅದೇ ರೈಲಿನಲ್ಲಿ ತೆರಳಲು ಬಂದು ಅಸ್ವಸ್ಥಗೊಂಡು ಬಿದ್ದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿದರು.

ಈ ಘಟನೆ ಬಂಟ್ವಾಳದ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಕಡಬ ತಾಲೂಕಿನ ನೆಲ್ಯಾಡಿಯಲ್ಲಿರುವ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಬಂಟ್ವಾಳದ ಬಿ.ಸಿ.ರೋಡು ನಿವಾಸಿ ಹೇಮಾವತಿ ಅವರು ಸೆ. 28ರಂದು ರಾತ್ರಿ ಬಂಟ್ವಾಳದಿಂದ ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದರು. ರೈಲು ಆಗಮಿಸುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಗೊಂಡು ಬಿದ್ದರು. ತತ್‌ಕ್ಷಣ ಉಪನ್ಯಾಸಕಿ ಅವರ ರಕ್ಷಣೆಗೆ ಮುಂದಾಗಿ ತಾವು ಹೋಗಬೇಕಿದ್ದ ರೈಲನ್ನು ಬಿಟ್ಟರು. ವ್ಯಕ್ತಿಯ ರಕ್ಷಣೆಗೆ ಬರುವಂತೆ ಇತರ ಪ್ರಯಾಣಿಕರಲ್ಲಿ ವಿನಂತಿಸಿದರೂ ಯಾರೂ ಬಂದಿರಲಿಲ್ಲ.

ಉಪನ್ಯಾಸಕಿ ಹೇಮಾವತಿ ಅವರು ಬಾಡಿಗೆ ರಿಕ್ಷಾ ಮೂಲಕ ಆ ವ್ಯಕ್ತಿಯನ್ನು ಬಿ.ಸಿ.ರೋಡಿನ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಆ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಯಿತು.

ಮರುದಿನ ಬೆಳಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆ ವ್ಯಕ್ತಿಯ ಆರೋಗ್ಯ ವಿಚಾರಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳಿದ್ದರು.

ಈ ವಿಚಾರ ಇಲ್ಲಿಗೆ ಮುಕ್ತಾಯಗೊಂಡು ಹೆಚ್ಚು ಸುದ್ದಿಯಾಗಿರಲಿಲ್ಲ.

ಅ. 17ರಂದು ಉಪನ್ಯಾಸಕಿ ಹೇಮಾವತಿ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಡಾ| ಪದ್ಮನಾಭ ಕಾಮತ್‌ ಅವರ ಬಳಿಗೆ ಬಂದಿದ್ದರು. ಅದೇ ಸಮಯದಲ್ಲಿ ಅಂದು ತನ್ನಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೂ ಚೇತರಿಸಿಕೊಂಡು ವೈದ್ಯರ ಬಳಿಗೆ ಬಂದಿದ್ದರು. ಆ ವ್ಯಕ್ತಿಯು ಡಾ| ಕಾಮತ್‌ ಅವರ ಬಳಿ ತನ್ನನ್ನು ಕಾಪಾಡಿದ ಮಹಾನ್‌ ತಾಯಿ ಇವರೇ ಎಂದು ವೈದ್ಯರಿಗೆ ಪರಿಚಯಿಸಿದರು. ತತ್‌ಕ್ಷಣ ಡಾ| ಕಾಮತ್‌ ಅವರು ಉಪನ್ಯಾಸಕಿಯ ಮಾನವೀಯ ಕಾರ್ಯವನ್ನು ಮೆಚ್ಚಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಈ ಮೂಲಕ ಉಪನ್ಯಾಸಕಿಯ ಮಾನವೀಯ ಕಾರ್ಯ ಸುದ್ದಿಯಾಯಿತು.ಉಪನ್ಯಾಸಕಿಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.