EPFO Clarification : ವೇತನ ರಹಿತ ರಜೆ ನೀವು ಪಡೆದಿದ್ದ ಸಮಯದಲ್ಲಿ ಮೃತಪಟ್ಟರೆ ಡೆತ್ ಬೆನಿಫಿಟ್ ಪಡೆಯಬಹುದು – ಇಪಿಎಫ್ ಒ
ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ.
ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗಿದ್ದು,ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ.
ಉದ್ಯೋಗಿಯು ವೇತನ ರಹಿತ ರಜೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೂ ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿ ಡೆತ್ ಬೆನಿಫಿಟ್ಗಳನ್ನು ಪಡೆಯಲು ಅವಕಾಶ ಕಲ್ಪಿಸಿರುವ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಮಾಹಿತಿ ನೀಡಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು.
ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು ಮತ್ತು ಉದ್ಯೋಗಿಗಳ ಠೇವಣಿ ಸಂಯೋಜಿತ ವಿಮಾ ಯೋಜನೆ ಅನ್ನು ಸಲ್ಲಿಸಬೇಕು ಎಂದು ಸೂಚಿಸಿತ್ತು.
ಇಪಿಎಫ್ಒ ಅಧಿಸೂಚನೆಯನ್ನೂ ಹೊರಡಿಸಿದ್ದು, ಉದ್ಯೋಗಿಯು ವೇತನ ರಹಿತ ಅಥವಾ ಇತರ ಯಾವುದೇ ಕಾರಣದ ರಜೆಯಲ್ಲಿದ್ದರೆ, ಆ ಸಂದರ್ಭದಲ್ಲಿ ಉದ್ಯೋಗದಾತರಿಂದ ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗದೇ ಇದ್ದರೆ ಮತ್ತು ಈ ಅವಧಿಯಲ್ಲಿ ಅವರು ಮೃತಪಟ್ಟರೆ ಖಾತರಿ ನೀಡಲಾದ ಭರವಸೆಗಳನ್ನು ನಿರಾಕರಿಸುವಂತಿಲ್ಲ.
ಮರಣ ಹೊಂದಿದ ಸಂದರ್ಭದಲ್ಲಿ ಅವರು ಉದ್ಯೋಗಿಯಾಗಿಯೇ ಇದ್ದರೆ ಮತ್ತು ಇತರ ನಿಗದಿತ ಷರತ್ತುಗಳನ್ನೆಲ್ಲ ಪೂರೈಸಿದ್ದರೆ ಅವರು ನಾಮನಿರ್ದೇಶನ ಮಾಡಿದವರಿಗೆ ಸವಲತ್ತುಗಳನ್ನು ಪೂರೈಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉದ್ಯೋಗಿಯು ಮೃತಪಟ್ಟ ಕೆಲವು ಪ್ರಕರಣಗಳಲ್ಲಿ, ಅವರಿಂದ ಪಿಎಫ್ ಖಾತೆಗೆ ಹಣ ಸಂದಾಯವಾಗುತ್ತಿಲ್ಲ ಎಂದು ಆರೋಪಿಸಿ ಕಂಪನಿಗಳು ಮರಣಾನಂತರ ನೀಡಬೇಕಾದ ಸವಲತ್ತುಗಳನ್ನು ನೀಡಲು ನಿರಾಕರಿಸಿದ್ದವು.
ಈ ಕುರಿತು ಹಲವು ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಇಪಿಎಫ್ಒ ಸ್ಪಷ್ಟೀಕರಣ ನೀಡಿದೆ.
ಉದ್ಯೋಗಿಯು ವೇತನ ರಹಿತ ರಜೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೂ ಭವಿಷ್ಯ ನಿಧಿ ಖಾತೆದಾರರಾಗಿದ್ದರೆ (PF) ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿ ಡೆತ್ ಬೆನಿಫಿಟ್ಗಳನ್ನು (ಉದ್ಯೋಗಿಗಳ ಠೇವಣಿ ಸಂಬಂಧಿತ ವಿಮೆ ಅಥವಾ EDLI ) ಪಡೆಯಲು ಅರ್ಹರಾಗಿರುತ್ತಾರೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಸ್ಪಷ್ಟಪಡಿಸಿದೆ.
ಇದರ ಜೊತೆಗೆ ಉದ್ಯೋಗಿಗಳು ವೇತನ ರಹಿತ ರಜೆಯಲ್ಲಿದ್ದು, ಅವರಿಂದ ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗದಿದ್ದರು ಕೂಡ ಡೆತ್ ಬೆನಿಫಿಟ್ಗಳನ್ನು ನಿರಾಕರಿಸುವಂತಿಲ್ಲ ಎಂದು ಇಪಿಎಫ್ಒ ಹೇಳಿದೆ.
ಪಿಎಫ್ ಖಾತೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಕಿರುಕುಳ ನೀಡಬಾರದು.
ಹಾಗೂ 7 ದಿನಗಳ ಒಳಗೆ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆದೇಶಿಸಿದ್ದು, ಉದ್ಯೋಗಿಯು ಕರ್ತವ್ಯದಲ್ಲಿದ್ದೂ ಉದ್ಯೋಗದಾತರು ಬೇರೆಯೇ ಕಾರಣ ನೀಡಿದರೆ ಇದನ್ನೂ ಪರಿಗಣಿಸಲಾಗುವುದಿಲ್ಲ .
ಈ ವಿಚಾರವಾಗಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ ದೃಢೀಕರಿಸಬೇಕು ಎಂದು ಇಪಿಎಫ್ಒ ಅಧಿಸೂಚನೆ ಉಲ್ಲೇಖಿಸಿದೆ.