ಮಂಗಳೂರು : KSRTC ಯಿಂದ ಭರ್ಜರಿ ‘ದೀಪಾವಳಿ ಪ್ಯಾಕೇಜ್’ | ಮಂಗಳೂರಿಗರೇ ಈ ಅವಕಾಶ ನಿಮ್ಮದಾಗಿಸಿಕೊಳ್ಳಿ!!!

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವು ದಸರಾ ವೇಳೆ ಪ್ರವಾಸ ಪ್ಯಾಕೇಜ್ ನಡೆಸಿ ಯಶಸ್ಸು ಕಂಡಿದೆ. ಮಂಗಳೂರು ವಿಭಾಗವು ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಗೆ ‘ದೀಪಾವಳಿ’ ಪ್ರವಾಸ ಪ್ಯಾಕೇಜ್ ಹಮ್ಮಿಕೊಂಡಿದೆ.

 

ಅ.21ರಿಂದ 31ರವರೆಗೆ (ಅ.25 ಹೊರತುಪಡಿಸಿ) ಪ್ರವಾಸ ಪ್ಯಾಕೇಜ್‌ನಲ್ಲಿ ತೆರಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಮಂಗಳೂರು- ಮಡಿಕೇರಿ ಟೂರ್ ಪ್ಯಾಕೇಜ್‌ನಲ್ಲಿ ರಾಜಸೀಟ್, ಅಬ್ಬಿಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್ ನೋಡಲು ಅವಕಾಶ ಇದೆ. ಬೆಳಿಗ್ಗೆ 7 ಗಂಟೆಗೆ ಹೊರಡುವ ಬಸ್ ರಾತ್ರಿ 10.30ಕ್ಕೆ ಮಂಗಳೂರಿಗೆ ವಾಪಸಾಗಲಿದೆ.

ಮಂಗಳೂರು- ಕೊಲ್ಲೂರು ಟೂರ್ ಪ್ಯಾಕೇಜ್‌ನಲ್ಲಿ ಮಾರಣಕಟ್ಟೆ, ಕೊಲ್ಲೂರು, ಕಮಲಶಿಲೆ, ಉಚ್ಚಿಲ ದೇವಸ್ಥಾನ ನೋಡಬಹುದು. ಮಂಗಳೂರು- ಪುತ್ತೂರು ಟೂರ್ ಪ್ಯಾಕೇಜ್‌ನಲ್ಲಿ ವಿಟ್ಲ ಪಂಚಲಿಂಗೇಶ್ವರ, ಮೃತ್ಯುಂಜೇಶ್ವರ, ಉಮಾಮಹೇಶ್ವರಿ, ಪುತ್ತೂರು ಮಹಾಲಿಂಗೇಶ್ವರ, ಗೆಜ್ಜೆಗಿರಿ, ಹನುಮಗಿರಿಗೆ ಭೇಟಿ ನೀಡಬಹುದು. ಈ ಪ್ರವಾಸದ ಬಸ್ ಬೆಳಿಗ್ಗೆ 8 ಗಂಟೆಗೆ ಹೊರಟು, ಸಂಜೆ 6.30ಕ್ಕೆ ವಾಪಸ್ ಮಂಗಳೂರಿಗೆ ಬರುತ್ತದೆ.

ಮಂಗಳೂರು ಟೂರ್ ಪ್ಯಾಕೇಜ್ 1ರಲ್ಲಿ ಕದ್ರಿ ದೇವಸ್ಥಾನ, ಪಾಣೆ ಮಂಗಳೂರು, ನಂದಾವರ ವಿನಾಯಕ, ಸುರ್ಯ ಕನ್ಯಾಡಿ, ಧರ್ಮಸ್ಥಳ, ಸೌತಡ್ಕ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಪುತ್ತೂರು ಮಹಾಲಿಂಗೇಶ್ವರ, ವಿಟ್ಲ ಪಂಚಲಿಂಗೇಶ್ವರ ದೇವಾಲಯಗಳು ಒಳಗೊಂಡಿವೆ. ಈ ಪ್ರವಾಸದ ಬಸ್ ಬೆಳಿಗ್ಗೆ 8ಕ್ಕೆ ಹೊರಟು ಸಂಜೆ 8ಕ್ಕೆ ವಾಪಸಾಗಲಿದೆ.

ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಈ ಮೂರೂ ಟೂರ್ ಪ್ಯಾಕೇಜ್‌ಗಳಿಗೆ ವಯಸ್ಕರಿಗೆ ತಲಾ ರೂ.500, ಆರು ವರ್ಷ ಮೇಲಿನ ಮಕ್ಕಳಿಗೆ ರೂ.450 ದರ ನಿಗದಿಪಡಿಸಲಾಗಿದೆ.

ಮಂಗಳೂರು ಟೂರ್ ಪ್ಯಾಕೇಜ್ 2 ರಲ್ಲಿ ಕುಡುಪು, ಮೂಡುಬಿದಿರೆ ಮಾರಿಯಮ್ಮ ದೇವಸ್ಥಾನ, ಸಾವಿರ ಕಂಬದ ಬಸದಿ, ಕೊಡ್ಯಡ್ಕ, ನೆಲ್ಲಿತೀರ್ಥ ಒಳಗೊಂಡಿದೆ. ಬೆಳಿಗ್ಗೆ 8 ಗಂಟೆಗೆ ಹೊರಡುವ ಬಸ್ ಎಲ್ಲ ಕ್ಷೇತ್ರಗಳ ಭೇಟಿಯ ನಂತರ ಸಂಜೆ 4.30ಕ್ಕೆ ವಾಪಸ್ ಮಂಗಳೂರಿಗೆ ಬರುತ್ತದೆ.

ಮಂಗಳೂರು ಟೂರ್ ಪ್ಯಾಕೇಜ್ 3ರಲ್ಲಿ ಮಂಗಳಾದೇವಿ, ಪೊಳಲಿ, ಕಟೀಲು, ಉಚ್ಚಿಲ, ಬಪ್ಪನಾಡು, ಸಸಿಹಿತ್ಲು, ತಣ್ಣೀರುಬಾವಿ ಬೀಚ್ ಸೇರಿವೆ. ಈ ಬಸ್ ಬೆಳಿಗ್ಗೆ 8 ಗಂಟೆಗೆ ಹೊರಟು ಸಂಜೆ 6ಕ್ಕೆ ವಾಪಸಾಗುತ್ತದೆ. ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಇವೆರಡೂ ಪ್ಯಾಕೇಜ್‌ಗಳಿಗೆ ವಯಸ್ಕರಿಗೆ ತಲಾ ರೂ.300, ಆರು ವರ್ಷ ಮೇಲಿನ ಮಕ್ಕಳಿಗೆ ತಲಾ ರೂ.250 ಟಿಕೆಟ್ ದರ ನಿಗದಿಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ಸ್ಥಳ ಕಾಯ್ದಿರಿಸಲು ಸೌಲಭ್ಯ

ಹೆಚ್ಚಿನ ಮಾಹಿತಿಗೆ 7760990702, 7760990711, ಮುಂಗಡ ಬುಕಿಂಗ್‌ಗೆ 9663211553 ಈ ಸಂಖ್ಯೆ ಸಂಪರ್ಕಿಸಬಹುದು. ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಅನ್ನು www.ksrtc.in ಇಲ್ಲಿ ಕಾಯ್ದಿರಿಸಬಹುದು.

Leave A Reply

Your email address will not be published.