ಬೆಳ್ಳಾರೆ : 7 ಸಾವಿರ ಕಟ್ಟಿದರೆ 1ಲಕ್ಷ ಹಣ ಬರುತ್ತೆ ಎಂದು ನಂಬಿಸಿ ಅಡಿಕೆ ವ್ಯಾಪಾರಿಯಿಂದ ಹಣ ಪಡೆದು ವಂಚನೆ

ಸುಳ್ಯ: ಒಂದು ಲಕ್ಷ ಇಪತ್ತು ಸಾವಿರ ರೂಪಾಯಿ ಸಿಗುವ ಮೋದಿಯವರ ಯೋಜನೆಯಿದೆ ಎಂದು ನಂಬಿಸಿ ಏಳು ಸಾವಿರ ಪಾವತಿಸಲು ತಿಳಿಸಿ ನಿಂತಿಕಲ್ಲಿನ ವ್ಯಕ್ತಿಯೊಬ್ಬರಿಗೆ ಅ. 18ರಂದು ವಂಚನೆ ಎಸಗಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ನಿಂತಿಕಲ್ಲಿನ ಅಡಿಕೆ ವ್ಯಾಪಾರದ ಅಂಗಡಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಮೊದಲಿಗೆ ಅಡಿಕೆ ಧಾರಣೆ ಕೇಳಿದ್ದು, ಬಳಿಕ ಮೋದಿಯವರ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಬರುವ ಯೋಜನೆ ಇದೆ. ನಿಮಗೆ ಆ ಹಣ ಬಂದಿದೆಯಾ ಎಂದು ವಿಚಾರಿಸಿದ್ದಾನೆ. ನನಗೆ ಬಂದಿಲ್ಲ ಎಂದು ವ್ಯಾಪಾರಿ ತಿಳಿಸಿದ್ದಾರೆ.ಈ ವಿಚಾರ ಬ್ಯಾಂಕ್‌ನವರಲ್ಲಿ ಮಾತನಾಡುತ್ತೇನೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿ ಫೋನ್‌ ಮಾಡಿ ಯಾರಲ್ಲೋ ಮಾತನಾಡುವ ನಾಟಕವಾಡಿದ್ದ.

ಬಳಿಕ ನೀವು ಒಮ್ಮೆ ಬ್ಯಾಂಕ್‌ಗೆ ಏಳು ಸಾವಿರ ರೂ. ಕಟ್ಟಲಿದೆ. ಬಳಿಕ ನಿಮಗೆ ಬರಬೇಕಾದ ಹಣದ ಚೆಕ್‌ ಕೊಡುತ್ತಾರೆ ಎಂದು ನಂಬಿಸಿದ್ದ. ಆತನ ಮಾತನ್ನು ನಂಬಿದ ವ್ಯಾಪಾರಿ ಏಳು ಸಾವಿರ ರೂ. ನೀಡಿದ್ದಾರೆ. ಬ್ಯಾಂಕ್‌ನಿಂದ ಈಗ ಚೆಕ್‌ ತರುತ್ತೇನೆ ಎಂದು ನಂಬಿಸಿದ ಆತ ಅಲ್ಲಿಂದ ಕಾಲ್ಕಿತ್ತಿದ್ದ.

ಬ್ಯಾಂಕ್‌ಗೆಂದು ಹೋದಾತ ನಾಪತ್ತೆಯಾಗಿದ್ದ. ಅನಂತರ ಆತ ಮಾಡಿದ್ದು ವಂಚನೆ ಎಂದು ತಿಳಿದಿತ್ತು. ಈ ಕುರಿತು ಬೆಳ್ಳಾರೆ ಪೋಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.