Kantara ; ತುಳು ಭಾಷೆಯಲ್ಲಿ ಕಾಂತಾರ |’ಶೆಟ್ರೇ ಎಂಕ್ಲೆ ಪೆರ್ಮೆ ಈರ್’ ಎಂದ ತುಳುವರು
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಜಗತ್ತಿನಾದ್ಯಂತ ರೂ.100 ಕೋಟಿ ಗಳಿಸಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈಗಲೂ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಇದೆ.
ಈ ಅದ್ಭುತ ಚಿತ್ರಕ್ಕೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ದೇಶ ವಿದೇಶಗಳಲ್ಲಿ ಈ ಸಿನಿಮಾವನ್ನು ಜನಸಾಮಾನ್ಯನಿಂದ ಹಿಡಿದು ಸೆಲೆಬ್ರೆಟಿಗಳು ಕೂಡಾ ಕೊಂಡಾಡುತ್ತಿದ್ದಾರೆ. ತಮಿಳು ಹಾಗೂ ಹಿಂದಿಯಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಮಲಯಾಳಂ ಆವೃತ್ತಿಯ ಸಿನಿಮಾ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವಲ್ಲೇ ತುಳುನಾಡಿನವರು ತುಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಇದೀಗ ತುಳುವರ ಬೇಡಿಕೆಯಂತೆಯೇ ತುಳು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಆದರೆ, ಯಾವ ದಿನಾಂಕದಂದು ತುಳುಭಾಷೆಯ ಆವೃತ್ತಿಯ ಚಿತ್ರ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಕಾಂತಾರ ಚಿತ್ರದಲ್ಲಿ ಕರಾವಳಿಯ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನು ಮೂಲಕ ಎಳೆ ಎಳೆಯಾಗಿ ತೋರಿಸಿದ್ದಾರೆ ರಿಷಬ್ ಶೆಟ್ಟಿ. ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ, ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟದ ಬಗ್ಗೆ ರಿಷಬ್ ಶೆಟ್ಟಿ ಕಾಂತಾರ ಮೂಲಕ ತೋರಿಸಿದ್ದು, ಅವರ ಈ ಪ್ರಯತ್ನ ಅದ್ಭುತ ಎಂದೇ ಹೇಳಬಹುದು.
ಕಾಂತಾರ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತೂಮಿನಾಡ್, ಸ್ವರಾಜ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಅವರ ಸಮಗ್ರ ತಾರಾಗಣ ಚಿತ್ರ ತಂಡದಲ್ಲಿದ್ದಾರೆ.