ದಾಂಡೇಲಿಯಲ್ಲಿ ರೋಚಕ ತಿರುವು ಪಡೆದ ವಿದ್ಯಾರ್ಥಿನಿ ಅಪಹರಣ ಪ್ರಕರಣ | ವಿದ್ಯಾರ್ಥಿನಿ ಹೇಳಿದ ಕಥೆಗೆ ಬೇಸ್ತು ಬಿದ್ದ ಪೊಲೀಸರು !!
ಉತ್ತರ ಕನ್ನಡ ಜಿಲ್ಲೆಯ ಹಳೆ ದಾಂಡೇಲಿಯಲ್ಲಿ ಮೊನ್ನೆ ಬೆಳ್ಳಂಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿನಿ ಕಾಣೆಯಾಗಿದ್ದು, ನಂತರ ಮನೆಗೆ ಬಂದ ಬಾಲಕಿ ತಾನು ಅಪಹರಣಗಾರರ ಕೈಯಿಂದ ತಪ್ಪಿಸಿಕೊಂಡು ಬಂದೆ ಎಂದು ಹೇಳುತ್ತಿದ್ದಂತೆ ಈ ಸುದ್ದಿ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೇ ನಗರಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುದ್ದಿ ಹರಿದಾಡಿ ಮಕ್ಕಳ ಪೋಷಕರು ಶಾಲೆ ಬಿಡುವುದಕ್ಕೆ ಮೊದಲೇ ಶಾಲೆಗಳ ಬಳಿ ಜಮಾಯಿಸಿದ ಘಟನೆ ನಡೆದಿತ್ತು.
ಪ್ರಕರಣದ ಗಂಭೀರತೆಯನ್ನು ಮನಗಂಡ ದಾಂಡೇಲಿ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಬಾಲಕಿ ಹೇಳಿದ ಅಪಹರಣದ ಕಥೆ ಕೇಳಿ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.
ಸೋಮವಾರದಿಂದ ದಸರಾ ರಜೆ ಮುಗಿದು ಸರ್ಕಾರಿ ಶಾಲೆಗಳಲ್ಲಿ ತರಗತಿಗಳು ಆರಂಭವಾಗಿವೆ. ಹಳೆದಾಂಡೇಲಿ ಭಾಗದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ವಿದ್ಯಾರ್ಥಿನಿ ಮನೆಯಿಂದ ಶಾಲಾ ಸಮವಸ್ತ್ರ ಧರಿಸಿ ಬಂದ ಈ ವಿದ್ಯಾರ್ಥಿನಿ ನೇರವಾಗಿ ಶಾಲೆಗೆ ಹೋಗದೇ ಕಿತ್ತೂರು ಚನ್ನಮ್ಮ ರಸ್ತೆಯವರೆಗೂ ಹೋಗಿ ಅಲ್ಲೇ ಪಕ್ಕದಲ್ಲೇ ಇರುವ ಮಿರಾಶಿ ಗಲ್ಲಿಯ ಬಳಿ ಮಾಯವಾಗಿದ್ದಾಳೆ. ನಂತರ ತನ್ನ ಅತ್ತೆಯ ಮನೆ ಸೇರಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಅತ್ತೆಯ ಮನೆಯವರು ವಿಚಾರಿಸಿದಾಗ ತನ್ನನ್ನು ಮಾರುತಿ ವ್ಯಾನ್ನಲ್ಲಿ ಬಂದ ಯಾರೋ ಇಬ್ಬರು ಕಿಡ್ನಾಪ್ ಮಾಡಿದ್ದರು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ವಾಹನವನ್ನು ನಿಲ್ಲಿಸಿದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದಿದ್ದಾಳೆ.
ವಿದ್ಯಾರ್ಥಿನಿಯ ಸಂಬಂಧಿಕರು ಈ ವಿಷಯವನ್ನು ಆಕೆಯ ಪಾಲಕರಿಗೆ ತಿಳಿಸಿ, ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಹರಣದ ಈ ಸುದ್ದಿ ಕಾಡ್ಗಿಚ್ಚಿನಂತೆ ನಗರದ ತುಂಬಾ ಹರಡಿದೆ. ದಂಡು ದಂಡಾಗಿ ಪೊಲೀಸರು ದಾಂಡೇಲಿಯಲ್ಲಿ ಹುಡುಕಾಟ ಶುರು ಮಾಡಿದ್ದಾರೆ. ಅಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಹರಡಿದೆ. ಎಲ್ಲಾ ಪೋಷಕರು ಆತಂಕಗೊಂಡಿದ್ದಾರೆ.
ಪೊಲೀಸರು ಕೂಡ ಘಟನೆಯ ಬಗ್ಗೆ ತಲೆಕೆಡಿಸಿಕೊಂಡು . ವಿದ್ಯಾರ್ಥಿನಿಯನ್ನು ಕರೆದುಕೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ನೀನು ಯಾವ ದಾರಿಯಲ್ಲಿ ಹೋಗುತ್ತಿದ್ದೆ. ಎಲ್ಲಿಂದ ಕಿಡ್ನಾಪ್ ಮಾಡಿದರು ಎಂಬ ಮಾಹಿತಿಯನ್ನು ಪಡೆಯುತ್ತಾ ಹೋಗಿದ್ದಾರೆ.
ಆಕೆ ಹೋದ ಹಾಗೂ ನಿಂತ ಮತ್ತು ತಪ್ಪಿಸಿಕೊಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಯಾವ ಸಿಸಿ ಕ್ಯಾಮೆರಾಗಳಲ್ಲಿಯೂ ಕೂಡ ಆಕೆಯ ಚಲನವಲನಗಳಾಗಲಿ ಅಥವಾ ಮಾರುತಿ ವ್ಯಾನ್ ಆಗಲಿ ನಿಂತ ಬಗ್ಗೆ ಸುಳಿವು ಸಿಗಲಿಲ್ಲ. ಮತ್ತೆ, ಮತ್ತೆ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದಾಗ ಆಕೆ ಅದೇ ಕತೆ ಹೇಳುತ್ತಿದ್ದಳು. ಹೀಗಾಗಿ ಪೊಲೀಸರಿಗೆ ಈ ಹುಡುಗಿಯ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.
ನಂತರ ಆಕೆಯನ್ನು ಪುಸಲಾಯಿಸಿ ಅಥವಾ ಜೋರು ಮಾಡಿ(?!) ಕೇಳಿದಾಗ ಆಕೆ ನಡೆದಿರುವ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ತಾನು ರಜಾದ ಮಜಾ ಅನುಭವಿಸಿದ ನಂತರ, ಪರೀಕ್ಷೆಗೆ ಅಂಜಿ ಈ ರೀತಿ ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೂ ಬಾಲಕಿ ಅಪಹರಣದ ರಹಸ್ಯ ಬಯಲಾಗಿದೆ.