ಅಡಿಕೆಯ ಎಲೆ ಚುಕ್ಕೆ ರೋಗ ನಿಯಂತ್ರಣ : ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದ ನಿಯೋಗ
ಕರಾವಳಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಭಾಗದ ರೈತ ಸಮುದಾಯವು ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗದಿಂದ ನಲುಗಿದ್ದು ನಿಯಂತ್ರಣದ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ದೆಹಲಿಗೆ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಲೆ ಚುಕ್ಕೆ ರೋಗವು ಇಡೀ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು, ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಅಪಾಯಕ್ಕೆ ತುತ್ತಾಗಿದೆ. ಅಡಿಕೆ ಬೆಳೆಯನ್ನು ಉಳಿಸಿ, ಬೆಳೆಗಾರರ ರಕ್ಷಣೆಗೆ ಬರಬೇಕಾದ ತುರ್ತು ಅಗತ್ಯವಿದ್ದು, ತಕ್ಷಣ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಇತರರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಎಲೆ ಚುಕ್ಕೆ ರೋಗದ ನಿಯಂತ್ರಣ ಬಗ್ಗೆ ಸಂಶೋಧನೆ, ರೈತರಿಗೆ ಪರಿಹಾರ ಹಾಗೂ ಇತರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶಿವಮೊಗ್ಗ ಸಂಸದ ಬಿ ವಯ್ ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಸೊರಬ ಮಂಜಪ್ಪ ನವರು ಹಾಗೂ ಇತರರು ನಿಯೋಗದಲ್ಲಿ ಭಾಗವಹಿಸುತ್ತಾರೆ ಎಂದೂ ಹೇಳಿದರು.