Kantara : ಬಸ್ ನಲ್ಲಿ ಬಂದು ಕಾಂತಾರ ಸಿನಿಮಾ ವೀಕ್ಷಿಸಿದ ಒಂದೇ ಊರಿನ 69 ಮಂದಿ | ಅಷ್ಟಕ್ಕೂ ಇವರೆಲ್ಲ ಎಲ್ಲಿಯವರು ಗೊತ್ತೇ?
ಎಲ್ಲೆಲ್ಲೂ ಕಾಂತಾರ ಹವಾ ಹೆಚ್ಚಿದೆ. ಒಂದು ಲೆಕ್ಕದಲ್ಲಿ ಕಾಂತಾರ ಹುಟ್ಟಿಸಿದ ಕ್ರೇಜ್ ಮುಗಿಯೋ ಹಾಗೇ ಕಾಣುವುದಿಲ್ಲ. ಎಲ್ಲಾ ಭಾಷೆಯಲ್ಲೂ ‘ಕಾಂತಾರ’ ಬಿಟ್ಟರೆ ಬೇರೆ ಸಿನಿಮಾಗಳ ಸದ್ದೇ ಇಲ್ಲ ಎನ್ನುವಂತಾಗಿ ಬಿಟ್ಟಿದೆ. ದಕ್ಷಿಣ ಭಾರತದಲ್ಲಂತೂ ರಿಷಬ್ ಶೆಟ್ಟಿಯ ಗುಣಗಾನ ಮಾಡದ ಜನರೇ ಇಲ್ಲ ಎನ್ನಬಹುದು. ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಬಗ್ಗೆನೇ ಚರ್ಚೆಗಳ ಮೇಲೆ ಚರ್ಚೆ ಆಗುತ್ತಿದೆ. ಭಾಷೆಯ ಭೇದ ಮರೆತು ಜನರು ಕೂಡ ಸಿನಿಮಾ ನೋಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾ ಆಗಿದ್ದರೂ, ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ ಸಿನಿ ಪ್ರೇಮಿಗಳು.
ಕಾಂತಾರ ಸಿನಿಮಾ ಹುಟ್ಟು ಹಾಕಿದ ಕ್ರೇಜ್ ಹೇಗಿದೆ ಅಂದ್ರೆ, ಇಲ್ಲೊಂದು ಗ್ರಾಮ ಜನರು ಸಿನಿಮಾ ನೋಡುವುದಕ್ಕೆ ಬಸ್ ಬುಕ್ ಮಾಡಿಕೊಂಡು ಬಂದಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಸಲಿಗೆ ಇವರು ಯಾರು? ಕಾಂತಾರ ನೋಡಲು ಈ ಗ್ರಾಮದ ಜನರು ಪಟ್ಟ ಸಾಹಸವೇನು? ತಿಳಿಯೋಣ ಬನ್ನಿ.
ರಿಷಬ್ ಶೆಟ್ಟಿಗೂ ಕಾಸರಗೋಡಿಗೂ ಬಿಡಲಾರದ ನಂಟು ಇದೆ. ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಸಿನಿಮಾ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಹಿಟ್ ಆಗಿತ್ತು. ಕಾಸರಗೋಡಿನ ಜನರೂ ಕೂಡ ಆ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದರು. ಈಗ ಅಲ್ಲಿನ ಜನರಿಂದ ರಿಷಬ್ ಶೆಟ್ಟಿಯ ‘ಕಾಂತಾರ’ಗೂ ದೊಡ್ಡ ಮಟ್ಟದ ಪ್ರೀತಿ ಸಿಕ್ಕಿದೆ.
ಕಾಂತಾರ’ ಸಿನಿಮಾಗೆ ಎಲ್ಲಾ ರಾಜ್ಯಗಳಲ್ಲೂ ಭರ್ಜರಿಯಾಗಿ ಪಬ್ಲಿಸಿಟಿ ಸಿಕ್ಕಿದೆ. ಹೀಗಾಗಿ ಅವರ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗದೇ ಹೋದರೂ, ಕನ್ನಡದಲ್ಲಿಯೇ ಸಿನಿಮಾ ನೋಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಕುಂಟಾಲುಮೂಲೆ ಎಂಬ ಗ್ರಾಮದ ಸುಮಾರು 69 ಮಂದಿ ‘ಕಾಂತಾರ’ ಸಿನಿಮಾವನ್ನು ಒಟ್ಟಿಗೆ ವೀಕ್ಷಿಸಿದ್ದಾರೆ. ತಮ್ಮ ಗ್ರಾಮದಿಂದ ಬಸ್ ಮೂಲಕ ಕಾಸರಗೋಡಿಗೆ ಪ್ರಯಾಣ ಮಾಡಿ ಬಂದು, ಸಿನಿಮಾ ವೀಕ್ಷಿಸಿದ್ದಾರೆ.
ಕಾಂತಾರ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಮಾತ್ರ ಡಬ್ ಆಗಿ ಸಿನಿಮಾ ಭರ್ಜರಿ ಓಟ ಮಾಡುತ್ತಿದೆ. ಆದರೆ ಇನ್ನೂ ಮಲಯಾಳಂಗೆ ಡಬ್ ಆಗಿಲ್ಲ. ಅಷ್ಟರಲ್ಲೇ ‘ಕಾಂತಾರ’ ಸಿನಿಮಾವನ್ನು ಕೇರಳದಲ್ಲಿ ಹಲವು ಮಂದಿ ವೀಕ್ಷಣೆ ಮಾಡಿದ್ದಾರೆ. ಕೇರಳದಲ್ಲೂ ಸಿನಿಮಾ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಇದೆ. ಅತೀ ಶೀಘ್ರದಲ್ಲಿ ಸಿನಿಮಾ ಮಲಯಾಳಂಗೆ ಡಬ್ ಆಗಿ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರ ಮನಸ್ಸು ತಣಿಸಲಿ ಎಂಬುದು ನಮ್ಮೆಲ್ಲರ ಆಶಯ.