Breaking News | ಮುಂಬರುವ ವಿಧಾನಸಭಾ ಚುನಾವಣೆಗೆ BJP ಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರಕಟ

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಆಗಿದೆ. ಬಿಜೆಪಿಯ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾರ್ಯವೈಖರಿಯಿಂದ ಸಂತಸಗೊಂಡಿದೆ ಮತ್ತು ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಈಗ ಮಾಡುತ್ತಿರುವ ಕಾರ್ಯ ಶೈಲಿಯಿಂದ ಕೇಂದ್ರದ ಬಿಜೆಪಿ ನಾಯಕರಿಗೆ ತುಂಬಾ ಸಂತೋಷವಾಗಿದ್ದು, ಅವರೇ ಬಿಜೆಪಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಹಾಗೆಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೋದಿ ಹಾಗೂ ಬೊಮ್ಮಾಯಿ ಸರ್ಕಾರದ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಎತ್ತಿ ಹಿಡಿದ ಅವರು, ಕರ್ನಾಟಕದಲ್ಲಿ ಒಟ್ಟು 224 ಸ್ಥಾನಗಳಲ್ಲಿ ಬಿಜೆಪಿ 150 ಕ್ಕೂ ಹೆಚ್ಹು ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ತನ್ನ ಗುರಿಯನ್ನು ಮೀರಿ ಹೊಸದಾಗಿ ಇತಿಹಾಸ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಬೊಮ್ಮಾಯಿ ಅವರ ಕಾರ್ಯವೈಖರಿ, ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರ ಪಾತ್ರ, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ನಿರೀಕ್ಷೆಗಳು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದ ಮೌಲ್ಯಮಾಪನದ ಕುರಿತು ಅರುಣ್ ಸಿಂಗ್ ಅವರನ್ನು ಕೇಳಲಾಗಿತ್ತು.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಹಾಗೂ ಸದ್ಯ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಆಡಳಿತ ಪಕ್ಷವು ಚುನಾವಣೆಯನ್ನು ಎದುರಿಸಲಿದೆ. ಬೊಮ್ಮಾಯಿ ಈಗ ಮುಖ್ಯಮಂತ್ರಿ. ಅವರೇ ಮುಖ್ಯಮಂತ್ರಿ ಅಭ್ಯರ್ಥಿ. ಯಾವುದೇ ಅನುಮಾನವಿಲ್ಲ ಎಂದು ಅರುಣ್ ಸಿಂಗ್ ಹೇಳಿದರು.

ಕಳೆದ ವರ್ಷ ಜುಲೈನಲ್ಲಿ ಯಡಿಯೂರಪ್ಪ ಅವರ ಬದಲಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೊಮ್ಮಾಯಿ ಅವರು ಸರಳ, ನಿಷ್ಠುರ ಮತ್ತು ಸಭ್ಯ ವ್ಯಕ್ತಿ ಎಂದು ಬಣ್ಣಿಸಿದ ಅವರು, ಸಾಮಾನ್ಯ ವ್ಯಕ್ತಿಯಾಗಿದ್ದವರು ಮುಖ್ಯಮಂತ್ರಿಯಾದರು ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಯವರು ಕೂಡ ತಮ್ಮಂತೆಯೇ ಸಾಮಾನ್ಯ ವ್ಯಕ್ತಿ ಎಂದು ಕರ್ನಾಟಕದ ಜನರು ಭಾವಿಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಎತ್ತರದ ನಾಯಕ ಮತ್ತು ಬಿಜೆಪಿ ಅವರ ‘ಮಾರ್ಗದರ್ಶನ’ವನ್ನು ಹೊಂದಿದೆ. ಯಡಿಯೂರಪ್ಪ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಮತ್ತು 150 ಸ್ಥಾನಗಳನ್ನು ಗೆಲ್ಲಲು ಮತ ಕೇಳುತ್ತಿದ್ದಾರೆ. ನಾವು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಾಂಪ್ರದಾಯಿಕ ಭದ್ರಕೋಟೆಗಳಾದ ಹಳೇ ಮೈಸೂರು ಪ್ರದೇಶದಲ್ಲಿ (ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ) ನೆಲೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದೆವೆ. ಅಲ್ಲಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ನಮ್ಮ ಶಕ್ತಿ ಗಣನೀಯವಾಗಿ ಆ ಪ್ರದೇಶದಲ್ಲಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಇದಲ್ಲದೆ ನಾವು ಹಳೇ ಮೈಸೂರು ಭಾಗದಲ್ಲಿ ಪವಾಡ ಮಾಡಲಿದ್ದೇವೆ. ಹಳೇ ಮೈಸೂರು ಮತ್ತು ‘ಕಲ್ಯಾಣ ಕರ್ನಾಟಕ’ ಪ್ರದೇಶದಲ್ಲಿನ (ಬೀದರ್, ರಾಯಚೂರು ಮತ್ತು ಕಲಬುರಗಿ) ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅನೇಕ ನಾಯಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಏಕೆಂದರೆ, ಬಿಜೆಪಿಯೇ ಸರ್ಕಾರ ರಚಿಸಲಿದೆ ಮತ್ತು ಬಿಜೆಪಿಯೊಂದಿಗೆ ಭವಿಷ್ಯವಿದೆ ಎಂಬುದನ್ನು ಅವರು ಅರಿತಿದ್ದಾರೆ ಎಂದು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದ್ದಾರೆ.

Leave A Reply

Your email address will not be published.