ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದ ‘ ಬನಾರಸ್ ‘ ನಾಯಕ ನಟ ಝೈದ್ ಖಾನ್, ಕರಾವಳಿ ಬೆಡಗಿ ಸೋನಲ್ ಮೊಂಥೆರೋ
ಬನಾರಸ್ (Banaras) ಸಿನಿಮಾ ರಿಲೀಸ್ ಬೆನ್ನಲ್ಲೇ ಬನಾರಸ್ ಬಾಬು ಝೈದ್ ಖಾನ್ (Zaid Khan) ಹಾಗೂ ಸೋನಲ್ ಮೊಂಥೆರೋ (Sonal Menthero) ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದಿದ್ದಾರೆ. ಆ ಮೂಲಕ ತಮ್ಮ ಚಿತ್ರಕ್ಕೆ ಮೂಡಿ ಬಂದ ಹಿಂದುತ್ವವಾದಿಗಳ ಪ್ರತಿಭಟನೆಯ ಬಿರುಸನ್ನು ತಣ್ಣಗೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ, ನೆಲ್ಲೂರ್ ದರ್ಗಾಕ್ಕೆ ಭೇಟಿ ಕೊಟ್ಟಿದ್ದಾರೆ. ಬಳಿಕ ಮಾಧ್ಯಮದವರೊಟ್ಟಿಗೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡು, ಒಂದೊಳ್ಳೆ ಸಿನಿಮಾ ಕೊಟ್ಟಿರುವ ಹೆಮ್ಮೆ ನಮ್ಮದು ಎಂದಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದಿದ್ದಾರೆ.
ಬನಾರಸ್ ಬಿಡುಗಡೆ ಹೊತ್ತಿನಲ್ಲಿ ಅತ್ತ ಝೈದ್ ಖಾನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ, ಇತ್ತ ಬಿಡುಗಡೆಗೆ ಬೇಕಿರುವಂಥಾ ತಯಾರಿಯೂ ತೀವ್ರವಾಗಿಯೇ ಶುರುವಾಗಿದೆ. ಇಂಥಾ ವಾತಾವರಣದಲ್ಲಿ ಬನಾರಸ್ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಹೊರಬಿದ್ದಿದ್ದು, ಈಗಾಗಲೇ ಕೇರಳದಲ್ಲಿ ದೊಡ್ಡ ಹೆಸರು ಮಾಡಿರುವ, ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಸದರುಇ ಸಂಸ್ಥೆ ಕೇರಳದಲ್ಲಿ ಬನಾರಸ್ ಅನ್ನು ಬಿಡುಗಡೆಗೊಳಿಸಿದೆ.
ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಕೇರಳದ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂದೇ ಹೆಸರುವಾಸಿಯಾಗಿರುವವರು. ಅವರು ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅದರೊಂದಿಗೇ ಮಲಕುಪ್ಪಡಮ್ ರಿಲೀಸ್ ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳ ವಿತರಕರಾಗಿಯೂ ಯಶಸ್ವಿಯಾಗಿದ್ದಾರೆ.
ಎಲ್ಲ ರೀತಿಯಲ್ಲಿಯೂ ಗುಣಮಟ್ಟ ಹೊಂದಿರುವ ಚಿತ್ರಗಳ ವಿತರಣಾ ಹಕ್ಕುಗಳನ್ನು ಖರೀದಿಸೋದು ಈ ಸಂಸ್ಥೆಯ ಅಭ್ಯಾಸ. ಈ ಸಂಸ್ಥೆ ಯಾವುದಾದರೂ ಒಂದು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿತೆಂದರೆ, ಆ ಚಿತ್ರದ ಬಗ್ಗೆ ತಾನೇ ತಾನಾಗಿ ನಿರೀಕ್ಷೆ ಗರಿ ಬಿಚ್ಚಿಕೊಳ್ಳುತ್ತದೆ. ಬನಾರಸ್ ಕೂಡಾ ಹಾಗೆಯೇ ಒಂದು ಒಳ್ಳೇ ಚಿತ್ರ ಆಗಿರಬಹುದು ಅನ್ನೋದು ಹಲವರ ನಿರೀಕ್ಷೆ ಮೂಡಿಸಿದೆ.