ಶಿವಮೊಗ್ಗ ಬಜರಂಗದಳ‌ ಕಾರ್ಯಕರ್ತ ಹರ್ಷಕೊಲೆ ಪ್ರಕರಣ : ಆರೋಪಿಗೆ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು !!!

ಬಜರಂಗದಳ‌ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿ ಜಾಫರ್‌ ಸಾದಿಕ್‌ (52) ಎಂಬಾತನಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.

 

ಶಿವಮೊಗ್ಗದಲ್ಲಿ ನಡೆದಿದ್ದ ಹರ್ಷ ಕೊಲೆ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಸೆಕೆಂಡ್‌ ಹ್ಯಾಂಡ್‌ ಕಾರ್‌ ಡೀಲರ್‌ ಆಗಿರುವ ಸಾದಿಕ್‌ನನ್ನು ಫೆಬ್ರುವರಿ 24 ರಂದು ಬಂಧಿಸಿದ್ದ ಪೊಲೀಸರು, ಹರ್ಷ ಕೊಲೆ ಪ್ರಕರಣದಲ್ಲಿ 10ನೇ ಆರೋಪಿಯಾಗಿ ಮಾಡಿದ್ದರು. ಪ್ರಕರಣದ 6ನೇ ಆರೋಪಿ ಜಿಲಾನ್‌ನ ತಂದೆಯಾದ ಸಾದಿಕ್‌, ಜಾಮೀನು ಕೋರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆರೋಪಿಯು 50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್‌ ಮತ್ತು ಶ್ಯೂರಿಟಿ ಜೊತೆಗೆ, ನ್ಯಾಯಾಲಯ ವಿನಾಯಿತಿ ನೀಡದ ಹೊರತು, ಪ್ರತಿ ಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗ ಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿ ಜಾಮೀನು ‌ನೀಡಿದೆ.

ಸಾದಿಕ್‌ ಪರ ವಕೀಲರು, ‘ಕಕ್ಷಿದಾರರು ಹರ್ಷ ಕೊಲೆ ಪ್ರಕರಣದ ಆರೋಪಿಯಾದ ತಮ್ಮ ಮಗ ಜಿಲಾನ್‌ಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದರು. ಅದನ್ನು ಹೊರತುಪಡಿಸಿದರೆ ಕಕ್ಷಿದಾರರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು.

ಎನ್‌ಐಎ ಪರ ವಾದ ಮಂಡಿಸಿದ ವಕೀಲರು, ‘ಸಾದಿಕ್‌ ಖರೀದಿಸಿದ್ದ ಕಾರುಗಳನ್ನು ಈ ಪ್ರಕರಣದ ಇತರೆ ಆರೋಪಿಗಳು ಅಪರಾಧ ಕೃತ್ಯದಲ್ಲಿ ಬಳಸಿದ್ದಾರೆ. ಹಾಗೂ ಕೃತ್ಯದ ನಂತರ ಸ್ಥಳದಿಂದ ತಪ್ಪಿಸಿಕೊಳ್ಳಲು ಉಪಯೋಗಿಸಿದ್ದಾರೆ. ಇದರ ಜೊತೆ ಜೊತೆಗೆ ಸಾದಿಕ್‌, ತಮ್ಮ ಮಗನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಮತ್ತು ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದಾನೆ. ಇಷ್ಟು ಕಾರಣಗಳಿಂದ ಇತರೆ ಆರೋಪಿಗಳ ಅಪರಾಧ ಕೃತ್ಯವು ಸಾದಿಕ್‌ಗೆ ಚೆನ್ನಾಗಿ ತಿಳಿದಿತ್ತು. ಈ ಕಾರಣಕ್ಕೆ ಸಾದಿಕ್‌ಗೆ ಜಾಮೀನು ನೀಡಬಾರದು’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

Leave A Reply

Your email address will not be published.