ಮಂಗಳೂರು : KSRTC ಯಿಂದ ಭರ್ಜರಿ ದೀಪಾವಳಿ ಟೂರ್ ಪ್ಯಾಕೇಜ್ ಆಫರ್ !!!
ದಸರಾ ಹಬ್ಬದ ರಂಗು ಮುಗಿಯುತ್ತಿದ್ದಂತೆ, ದೀಪಾವಳಿ ಹಬ್ಬದ ಸಂಭ್ರಮವನ್ನು ಜನರಿಗೆ ದುಪ್ಪಟ್ಟು ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಶೇಷ ಪ್ಯಾಕೇಜ್ ನೀಡಲು ಅಣಿಯಾಗುತ್ತಿದೆ.
ದಸರಾ ಹಬ್ಬದ ಪ್ರಯುಕ್ತ ಟೆಂಪಲ್ ರನ್ ಮಾಡಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ, ದೀಪಾವಳಿಯ ಮೆರುಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇವಸ್ಥಾನ ದರ್ಶನ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಈ ಟೂರ್ ಪ್ಯಾಕೆಜ್ ಸಹಕಾರಿಯಾಗಲಿದೆ.
ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಟೂರ್‌ನ (Mangaluru KSRTC Package Tour) ಯಶಸ್ಸಿನಿಂದ ಉತ್ತೇಜಿತವಾಗಿರುವ ಕೆಎಸ್‌ಆರ್‌ಟಿಸಿ ವಿಭಾಗವು ವಾರಾಂತ್ಯದ ಪ್ರವಾಸದ ಪ್ಯಾಕೇಜ್‌ಗಳನ್ನು ಆರಂಭಿಸಲು ಮುಂದಾಗಿದೆ .
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC Bus) ಮಂಗಳೂರು ವಿಭಾಗವು ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ವಾರಾಂತ್ಯದಲ್ಲಿ ಪ್ಯಾಕೇಜ್ ಟೂರ್‌ಗಳನ್ನು (KSRTC Bus Package) ಪರಿಚಯಿಸಿದೆ.
ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಮಾದರಿಯಲ್ಲಿ ಅಕ್ಟೋಬರ್ 21 ರಿಂದ 27 ರವರೆಗೆ ದೀಪಾವಳಿಗೆ ಟೂರ್ ಪ್ಯಾಕೇಜ್ ಅನ್ನು ಆರಂಭಿಸಲು ತಯಾರಾಗಿದೆ. ಪ್ಯಾಕೇಜ್ ಟೂರ್ ಅಡಿಯಲ್ಲಿ ಕನಿಷ್ಠ ಐದರಿಂದ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದರೆ ಹೆಚ್ಚಿನ ಬಸ್‌ಗಳನ್ನು ಓಡಿಸಲು ತೀರ್ಮಾನ ಕೈಗೊಳ್ಳಲಾಗಿದೆ .
ಸುಪ್ರಸಿದ್ಧ ದೇವಸ್ಥಾನಗಳಾದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವನ್ನು ಒಳಗೊಂಡ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ ಕುಂದಾಪುರ ಮತ್ತು ಉಡುಪಿಯನ್ನು ಸಹ ಸೇರಿಸಲಾಗಿದೆ.
ನೋಂದಾಯಿತ ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಇದನ್ನು ಬಳಸಿಕೊಂಡು ಅವರು ಬಸ್ ಹತ್ತುವ ಸ್ಥಳದಿಂದ 45 ಕಿ.ಮೀ ದೂರ ಪ್ರಯಾಣಿಸಬಹುದು. ಕರ್ನಾಟಕದಲ್ಲಿ ಸುಮಾರು 37 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದು, ಒಂದು ಲಕ್ಷ ಕಾರ್ಮಿಕರಿಗೆ ಪಾಸ್ ನೀಡಲು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಮೂರು ತಿಂಗಳ ನಂತರ ಪಾಸ್ಗಳನ್ನು ನವೀಕರಿಸಬೇಕಾಗಿದ್ದು, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಇಲಾಖೆಯಿಂದ ಹಣವನ್ನು ಮರುಪಾವತಿ ಮಾಡಲಾಗುವುದು. ಪ್ರತಿ ಉಚಿತ ಬಸ್ ಪಾಸ್ಗಳಿಗೆ ಇಲಾಖೆಯು ತಿಂಗಳಿಗೆ 1,400 ರೂ.ಗಳನ್ನು ಕೆಎಸ್‌ಆರ್‌ಟಿಸಿ ಮರುಪಾವತಿ ಮಾಡಲಿದೆ.
ವಾರಾಂತ್ಯಗಳಲ್ಲಿ ದಕ್ಷಿಣ ಕನ್ನಡದ ವಿವಿಧ ಪ್ರಸಿದ್ಧ ದೇವಸ್ಥಾನಗಳ ಪ್ರವಾಸಕ್ಕೆ ಈ ಬಸ್‌ಗಳನ್ನು ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದ್ದು, ಪುತ್ತೂರು ವಿಭಾಗದಲ್ಲಿ ಕೂಡ ಬೇಡಿಕೆ ಬಂದರೆ ಅಂತಹ ಟೂರ್ ಪ್ಯಾಕೇಜ್ ಗಳನ್ನೂ ಪರಿಚಯಿಸುವ ಯೋಜನೆಯಿದೆ.
ಹಬ್ಬದ ಸಂಭ್ರಮದಲ್ಲಿ ದೇವಸ್ಥಾನ ದರ್ಶನ ಮಾಡಿ, ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಲು ಬಯಸುವವರು KSRTC ಮಂಗಳೂರು ವಿಭಾಗದ ಟೂರ್ ಪ್ಯಾಕೇಜ್ ನ ಸದುಪಯೋಗ ಪಡಿಸಿಕೊಳ್ಳಬಹುದು.