ವಿಶ್ವವಿದ್ಯಾನಿಲಯಗಳಲ್ಲಿ ರ‍್ಯಾಗಿಂಗ್ ಕಡಿವಾಣಕ್ಕೆ ಮಾರ್ಗಸೂಚಿ ಹೊರಡಿಸಿದ ಯುಜಿಸಿ : ಏನು ಆ ಮಾರ್ಗಸೂಚಿಗಳು ?
ವಿಶ್ವ ವಿದ್ಯಾನಿಲಯಗಳಲ್ಲಿ ವ್ಯಾಪಕವಾಗುತ್ತಿರುವ ರ‍್ಯಾಗಿಂಗ್ ದಂಧೆಗೆ ಕಡಿವಾಣ ಹಾಕಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿ , ಆದೇಶಿಸಿದೆ.
ವಿಶ್ವವಿದ್ಯಾಲಯಗಳಲ್ಲಿ ಭಯದ ಮತ್ತು ಆತಂಕದ ವಾತಾವರಣವನ್ನು ವಿಮುಕ್ತಿಗೊಳಿಸಲು ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂವಹನ ಮತ್ತು ಸಮಾಲೋಚನೆ, ರ‍್ಯಾಗಿಂಗ್ ವಿರೋಧಿ ಸಮಿತಿ ರಚನೆ, ಹಾಗೂ ವಿದ್ಯಾರ್ಥಿನಿಲಯಗಳಿಗೆ ಭೇಟಿ ಮುಂತಾದ ನಿರ್ಮೂಲನಾ ಅಸ್ತ್ರಗಳನ್ನು ಜಾರಿಗೊಳಿಸಿದೆ.
ಕಾಲೇಜು ನೋಟಿಸ್ ಬೋರ್ಡ್, ಬ್ರೋಶರ್ ಗಳಲ್ಲಿ ರ‍್ಯಾಗಿಂಗ್ ವಿರೋಧಿ ಭಿತ್ತಿ ಚಿತ್ರಗಳ, ಬರಹಗಳ ಮೂಲಕ ಜಾಗೃತಿ ಮೂಡಿಸಬೇಕು. ಕಾಲೇಜಿನ ಆವರಣದಲ್ಲಿ ರ‍್ಯಾಗಿಂಗ್ ವಿರೋಧಿ ಪೋಸ್ಟರ್ ಹಾಕಬೇಕು. ವಿಶ್ವವಿದ್ಯಾನಿಲಯದ ಬಹುತೇಕ ಕಡೆಗಳಲ್ಲಿ ಸಿ ಸಿ ಕೆಮರಾವನ್ನು ಅಳವಡಿಸಬೇಕು. ವಿದ್ಯಾರ್ಥಿಗಳೊಂದಿಗೆ ಸಂಬಂಧಪಟ್ಟ ಸಿಬ್ಬಂದಿಗಳು ನಿಕಟ ಸಂಪರ್ಕ ಹೊಂದಿರಬೇಕು ಎಂದು ಆದೇಶಿಸಿದೆ.
ಯಾವುದೇ ಸಂಸ್ಥೆಯು ಈ ಆದೇಶವನ್ನುಅನುಸರಿಸಲು ವಿಫಲವಾದರೆ ಅಥವಾ ರ‍್ಯಾಗಿಂಗ್ ತಡೆಗಟ್ಟಲು ಅಥವಾ ಅಪರಾಧಿಗಳನ್ನು ಶಿಕ್ಷಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಯುಜಿಸಿಯು ಸಂಸ್ಥೆಯ ವಿರುದ್ಧ ಶಿಕ್ಷಾರ್ಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದೂ ತಿಳಿಸಿದೆ.
ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ರ‍್ಯಾಗಿಂಗ್ ವಿರೋಧಿ ಅಫಿಡವಿಟ್ ಸಲ್ಲಿಸಲು ಸಂಸ್ಥೆಗಳು ಪರಿಷ್ಕೃತ ವಿಧಾನವನ್ನು ಜಾರಿಗೆ ತರಬೇಕು. ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡಿ ಅರಿವು ಮೂಡಿಸಬೇಕು ಎಂದೂ ಹೇಳಿದೆ.