ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು, ಪಿಡಿಒಗಳಿಗೆ ಅಧಿಕಾರ
ಭ್ರಷ್ಟಚಾರಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ, ಆದೇಶ ವಾಪಾಸು ಪಡೆಯದಿದ್ದರೆ ಉಗ್ರ ಹೋರಾಟ
ಸುಧೀರ್ ಕುಮಾರ್ ಶೆಟ್ಟಿ

ಕಡಬ: ವ್ಯವಸ್ಥಿತ ಪಿತೂರಿಯೊಂದಿಗೆ ರಾಜ್ಯ ಸರಕಾರವು ಮುಖ್ಯ ಕಾರ್ಯದರ್ಶಿ ಗಳ ಮೂಲಕ ಆದೇಶವೊಂದನ್ನು ಪಂಚಾಯತ್ ಗಳಿಗೆ ರವಾನಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧ್ಯಕ್ಷರ ಹಾಗೂ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಿದೆ, ತನ್ಮೂಲಕವಾಗಿ ಗ್ರಾಮ ಸ್ವರಾಜ್ ಕನಸುಗಳಿಗೆ ಕೊಡಲಿಯೇಟು ನೀಡಿದೆ ಎಂದು ಬಿಳಿನೆಲೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರೂ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿರವರು ಆರೋಪಿಸಿದ್ದಾರೆ.
ಅಧಿಕಾರದ ವಿಕೇಂದ್ರೀಕರಣದ ಆಶಯಗಳನ್ನು ಹೊತ್ತು ಅನುಷ್ಠಾನಿಸಲ್ಪಟ್ಟ ಪಂಚಾಯತ್ ರಾಜ್ ವ್ಯವಸ್ಥೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಹತ್ವದ ಸ್ಥಾನವನ್ನು ನೀಡಲಾಗಿತ್ತು. ಗ್ರಾಮ ಸರಕಾರದ ನಿರ್ಧಾರವು ವಿಧಾನಸಭೆಯ ತೀರ್ಮಾನದಂತೆಯೇ ಕಾನೂನಾತ್ಮಕವಾಗಿ ಅನುಷ್ಠಾನಿಸಲ್ಪಡುವಂತ್ತಿತ್ತು. ಅಷ್ಟರಲ್ಲಾಗಲೇ ಈಗಿನ ರಾಜ್ಯ ಸರಕಾರವು ತಿದ್ದುಪಡಿಗೊಳಿಸಿ ಪಂಚಾಯತ್ ಪ್ರತಿನಿಧಿಗಳಿಗೆ ಇದ್ದ ಅಧಿಕಾರವನ್ನು ಕಸಿದುಕೊಂಡಿದೆ. ಈ ರೀತಿ ಮೂಲಕ ಅಧಿಕಾರಿಶಾಹಿ ವ್ಯವಸ್ಥೆಗೆ ಸರಕಾರವು ಪರೋಕ್ಷವಾಗಿ ಮಣಿದಂತಿದೆ ಎಂದು ಆರೋಪಿಸಿದ್ದಾರೆ.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇನ್ನು ಮುಂದಕ್ಕೆ ಯಾವುದೇ ಬಿಲ್ ಪಾಸ್ ಮಾಡುವ ಅಥವಾ ಚೆಕ್ ಮೂಲಕ ಪಾವತಿ ಗೈಯುವ ವ್ಯವಸ್ಥೆಗೆ ಅಧ್ಯಕ್ಷರು ಸಹಿ ಮಾಡುವಂತಿಲ್ಲ. ಈ ಅಧಿಕಾರವನ್ನು ಪಿಡಿಓ ಮತ್ತು ಲೆಕ್ಕ ಸಹಾಯಕರಿಗೆ ಜಂಟಿಯಾಗಿ ನೀಡಲಾಗಿದೆ. 9/11 ಮತ್ತು 9/11ಬಿ, ನಿರಾಕ್ಷೇಪಣಾ ಪತ್ರ ಮುಂದಾದ ಆದೇಶಗಳನ್ನು ಪಂಚಾಯತ್ ಸಭೆಗಳಲ್ಲಿ ಮಂಡಿಸಿ ಯಾವುದೇ ಆಪೇಕ್ಷಣೆಗಳಿಲ್ಲದಿದ್ದಲ್ಲಿ ಮುಂದೆ ಆಯಾಯ ವ್ಯಕ್ತಿಗೆ ನೀಡುವ ಅಧಿಕಾರವನ್ನು ಕಳಚಿ ನೇರವಾಗಿ ಪಿಡಿಓ ಇವುಗಳನ್ನೆಲ್ಲಾ ನೀಡಬಹುದೆಂದೂ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಇದು ಭ್ರಷ್ಟಾಚಾರವನ್ನು ಇನ್ನಷ್ಟು ಪೋಷಿಸಲಿದೆ ಎಂದಿದ್ದಾರೆ. ಈಗಾಗಲೇ 40% ಕಮೀಷನ್ ಪಡೆಯುತ್ತಿರುವ ಬಿಜೆಪಿ ಸರಕಾರ ಗೌರವಾನ್ವಿತ ಪಂಚಾಯತ್ ಅಧ್ಯಕ್ಷರ ಹಾಗೂ ಜನಪ್ರತಿನಿಧಿಗಳ ಅಧಿಕಾರವನ್ನು ಕಸಿದುಕೊಳ್ಳಲು ಆದೇಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದನ್ನು ಪ್ರಜ್ಞಾವಂತ ನಾಗರಿಕರಿಗೆ ತಿಳಿಯಬೇಕಾಗಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ತಿದ್ದಪಡಿ ಮಾಡದಿದ್ದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರನ್ನು ಸೇರಿಸಿಕೊಂಡು ಸಾರ್ವಜನಿಕರೊಂದಿಗೆ ಉಗ್ರವಾದ ಹೋರಾಟವನ್ನು ಮಾಡುವುದಾಗಿ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ

 

Leave A Reply

Your email address will not be published.