ಪೆರುವಾಜೆ : ನವರಾತ್ರಿ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ
ಪೆರುವಾಜೆ: ಸಂಸ್ಕಾರ, ಸಂಸ್ಕೃತಿಯುಕ್ತ ಯುವ ಶಕ್ತಿಯಿಂದ ಜಾಗೃತ ಸಮಾಜ ನಿರ್ಮಾಣಗೊಳ್ಳುತ್ತದೆ. ತನ್ಮೂಲಕ ಶ್ರದ್ದಾ ಕೇಂದ್ರಗಳು ಸಮಾಜದ ಧರ್ಮ ಕೇಂದ್ರವಾಗಿ ಉಳಿಯುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಪ್ರಯುಕ್ತ ಅ.4 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತ್ಯಾಗದಿಂದ ಮಾಡುವ ಸೇವೆ ದೇವರಿಗೆ ಸಲ್ಲುತ್ತದೆ. ತ್ಯಾಗ-ಸೇವೆಯ ಬದುಕಿನಿಂದ ಭವ್ಯ ಭಾರತದ ನಿರ್ಮಾಣ ಸಾಧ್ಯವಿದೆ ಎಂದರು.
ಬಾಂಧ್ಯವದ ಬೆಸುಗೆ ಮೂಲ ನಂಬಿಕೆ. ಧರ್ಮಯುಕ್ತವಾದ ಧರ್ಮಪ್ರಜ್ಞೆಯ ಆಚರಣೆಗಳು ಮೂಲ ನಂಬಿಕೆಗಳು ಎಂದ ಅವರು ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಯ ಅಗತ್ಯತೆಗಳ ಬಗ್ಗೆ ಅವರು ವಿಶ್ಲೇಷಿಸಿದರು.
ಅಳುವ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಸಮಾಧಾನಿಸುವ ಪ್ರಯತ್ನವನ್ನು ಪೋಷಕರು ಮಾಡುತ್ತಾರೆ. ಇದು ಅಪಾಯಕಾರಿ. ಏಕೆಂದರೆ ಮೊಬೈಲ್ ಅನ್ನು ಉತ್ತಮ ಉದ್ದೇಶಕ್ಕೆ ಬಳಸುವ ಬದಲು ತಪ್ಪು ದಾರಿಗೆ ಬಳಸುತ್ತಿರುವ ಘಟನೆಗಳ ಹೆಚ್ಚುತ್ತಿರುವ ಬಗ್ಗೆ ಪೋಷಕರು ಗಂಭೀರವಾಗಿ ಯೋಚನೆ ಮಾಡಬೇಕು ಎಂದರು.
ಕ್ಷೇತ್ರದ ತಂತ್ರಿ ಕಾರ್ತಿಕ್ ಕೆಮ್ಮಿಂಜೆ ಧಾರ್ಮಿಕ ಉಪನ್ಯಾಸ ನೀಡಿ, ವಿಶ್ವಾಸದಿಂದ ಭಗವಂತನ ಆರಾಧನೆ ಮಾಡಿದರೆ ಅನುಗ್ರಹ ಪಡೆಯಲು ಸಾಧ್ಯವಿದೆ. ನಮ್ಮ ಮನಸ್ಸಿನೊಳಗಿನ ವೈರಿಗಳನ್ನು ನಾಶ ಮಾಡಿದರೆ ಆತ್ಮೋದ್ಧಾರ ಸಾಧ್ಯವಿದೆ ಎಂದರು.
ಭಗವಂತನ ಉಪಾಸನೆಗೆ ಸಾಕಷ್ಟು ಮಹತ್ವ ಇದೆ. ಪ್ರತಿ ಕಾರ್ಯಕ್ಕೆ ನವ ಶಕ್ತಿಯ ಅನುಗ್ರಹ ಅತೀ ಅಗತ್ಯ ಎಂದ ಅವರು ಹಬ್ಬ ಹರಿದಿನಗಳ ಆಚರಣೆಯ ವಿಧಾನ ಅರಿತು ಅದನ್ನು ಮಕ್ಕಳಿಗೆ ಹೇಳಬೇಕು. ಆಗ ಸಂಸ್ಕೃತಿಯ ರಕ್ಷಣೆ ಸಾಧ್ಯವಿದೆ ಎಂದರು.
ಸಭಾ ಅಧ್ಯಕ್ಷತೆಯನ್ನು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ವಹಿಸಿದ್ದರು. ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್.ಪ್ರಸಾದ್, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮಣಿಕ್ಕಾರ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಪಟೇಲು ನಾರಾಯಣ ರೈ ಪಾಲ್ತಾಡು, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ, ಬೆಳ್ಳಾರೆ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಶ್ಯಾನುಭಾಗ್, ಪೆರುವಾಜೆ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ಪಿ.ಜಗನ್ನಾಥ ರೈ, ದಾಮೋದರ ನಾಯ್ಕ, ಭಾಗ್ಯಲಕ್ಷ್ಮೀ ಅರ್ನಾಡಿ, ಯಶೋಧ ಎ.ಎಸ್.ಉಪಸ್ಥಿತರಿದ್ದರು.
ಒಡಿಯೂರು ಶ್ರೀಗಳನ್ನು ಬೆಳ್ಳಾರೆ ಹಾಗೂ ಪೆರುವಾಜೆ ಒಡಿಯೂರು ಸೇವಾ ಘಟಕದ ವತಿಯಿಂದ ಗೌರವಿಸಲಾಯಿತು. ತನ್ವಿ ಅರ್ನಾಡಿ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಪ್ರಕಾಶ್ ರೈ ಪೆರುವಾಜೆ ಸ್ವಾಗತಿಸಿದರು. ಸದಸ್ಯ ನಾರಾಯಣ ಕೊಂಡೆಪ್ಪಾಡಿ ವಂದಿಸಿದರು. ವಾಸುದೇವ ಪೆರುವಾಜೆ ನಿರೂಪಿಸಿದರು.
ಪೂರ್ಣಕುಂಭದ ಸ್ವಾಗತ
ಕ್ಷೇತ್ರಕ್ಕೆ ಆಗಮಿಸಿದ ಒಡಿಯೂರು ಶ್ರೀಗಳನ್ನು ಪೂರ್ಣಕುಂಭದ ಸ್ವಾಗತದೊಂದಿಗೆ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಸ್ವಾಗತಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ಪಿ.ಜಗನ್ನಾಥ ರೈ, ಜಯಪ್ರಕಾಶ್ ರೈ ಪೆರುವಾಜೆ, ನಾರಾಯಣ ಕೊಂಡೆಪ್ಪಾಡಿ, ದಾಮೋದರ ನಾಯ್ಕ, ಭಾಗ್ಯಲಕ್ಷ್ಮೀ ಅರ್ನಾಡಿ, ಯಶೋಧ ಎ.ಎಸ್., ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಉಪಸ್ಥಿತರಿದ್ದರು.
ನವರಾತ್ರಿ ಉತ್ಸವ
ಸಾವಿರಾರು ಭಕ್ತರು
ಕ್ಷೇತ್ರದಲ್ಲಿ ಕಳೆದ ಸೆ.25 ರಿಂದ ನಡೆಯುತ್ತಿರುವ ನವರಾತ್ರಿ ಉತ್ಸವಕ್ಕೆ ಸುಳ್ಯ ತಾಲೂಕು ಹಾಗೂ ಹೊರ ತಾಲೂಕಿನ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಭಕ್ತರ ಆಗಮನವಾಗಿದ್ದು ದಿನಂಪ್ರತಿ ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಾವಿರಾರು ವಾಹನ ಪೂಜೆ ನಡೆಯಿತು.