‘ರಿವರ್ಸ್’ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿದ 2000 ರೂ. ಬೆಲೆಯ ನೋಟುಗಳು | ಕಾಗುಣಿತ ಗೊತ್ತಿಲ್ದೇ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಕಳ್ಳರು !
ಸೂರತ್ : ಕಾಗುಣಿತ ಮತ್ತು ಪ್ರಿಂಟಿಗೆ ಹೋಗುವ.ಮೊದಲು ಚೆಕ್ ಮಾಡೋದು ಎಷ್ಟು ಮುಖ್ಯ ಅನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಆದೀತು. ಕಳ್ಳರು ಕೂಡಾ ಒಳ್ಳೆಯ ಓದು ಓದಿಕೊಂಡು ಬರಬೇಕು, ಇಲ್ಲದೆ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಗುಜರಾತ್ನ ಸೂರತ್ನಲ್ಲಿ ಆಂಬುಲೆನ್ಸ್ನಲ್ಲಿ ಕಳ್ಳನೋಟು ಸಾಗಣೆ ಮಾಡಿ ಸಿಕ್ಕಿಬಿದ್ದಿದ್ದಾರೆ ಖದೀಮರು.
ಇಷ್ಟೇ ಆಗಿದ್ದರೆ, ಇದು ದೊಡ್ಡ ಸುದ್ದಿನೇ ಆಗುತ್ತಿರಲಿಲ್ಲವೇನೋ. 26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಳ್ಳನೋಟನ್ನು ಇಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಆದರೆ ಚೋದ್ಯ ಏನೆಂದರೆ ನೋಡಲು ಥೇಟ್ ಅಸಲಿ ನೋಟಿನಂತೆಯೇ ಇದ್ದ ಈ ನಕಲಿ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪೊಲೀಸರು ಮುಖ ಮುಖ ನೋಡಿಕೊಂಡಿದ್ದರು. ಕಾರಣ, ಆ ನೋಟನ್ನು ಮುದ್ರಿಸಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಲ್ಲ, ಬದಲಿಗೆ ‘ ರಿವರ್ಸ್ ‘ ಬ್ಯಾಂಕ್ ಆಫ್ ಇಂಡಿಯಾ !
ಅಲ್ಲಿನ ಅಂಬುಲೆನ್ಸ್ನಲ್ಲಿ ಸಾಗಿಸುತ್ತಿದ್ದ ಈ ಕಳ್ಳನೋಟನ್ನು ಪರಿಶೀಲಿಸಿದಾಗ ಅದರಲ್ಲಿ ರಿಸರ್ವ್ ಬ್ಯಾಂಕ್ ಬದಲು ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ‘ ರಿವರ್ಸ್’ ಬ್ಯಾಂಕ್ ಆಫ್ ಇಂಡಿಯಾ ಎಂದು ಪ್ರಿಂಟ್ ಮಾಡಲಾಗಿತ್ತು! ಕಳ್ಳ ನೋಟು ಆಗಿದ್ದರೂ, ಎಲ್ಲಾ ರೀತಿಯಿಂದ ಒರಿಜಿನಲ್ ನೋಟಿನ ಹಾಗೇ ಡಿಸೈನ್ ಮಾಡಿ ಪ್ರಿಂಟ್ ಹಾಕಿಸಿದ್ದ ಕಳ್ಳರು, ಸ್ಪೆಲ್ಲಿಂಗ್ ತಿದ್ದುವಲ್ಲಿ ಸೋತಿದ್ದರು. ಬಹುಶಃ ಗ್ರಾಮರಿನಲ್ಲಿ ವೀಕ್ ಅನ್ಸುತ್ತೆ. ಇದೀಗ ಆ ಕಾರಣಕ್ಕೆ ಸಿಕ್ಕಿ ಬಿದ್ದಿದ್ದಾರೆ.
2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು 1,290 ಬಂಡಲ್ ಆರು ಪೆಟ್ಟಿಗೆಗಳಲ್ಲಿ ಇಡಲಾಗಿತ್ತು. ಪೊಲೀಸರು ‘ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ’ ದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ರೀತಿ, ಹಿಂದೊಮ್ಮೆ ಓದು ಬರಹ ತಿಳಿಯದ ಕಳ್ಳರು ಎಟಿಎಂ ಹೊತ್ತೊಯ್ಯುವ ಬದಲು, ಪಾಸ್ ಬುಕ್ ಪ್ರಿಂಟ್ ಮಾಡುವ ಮಿಶಿನ್ ಅನ್ನು ಕಿತ್ತೊಯ್ದು ಯಾಮಾರಿದ್ದರು. ಕಳ್ಳತನ ಮಾಡಲು ಕೂಡಾ ಎಜುಕೇಶನ್ ಅಗತ್ಯ ಮಾರಾಯ್ರೆ !