Village Accountant | ಗ್ರಾಮ ಲೆಕ್ಕಿಗ ಉದ್ಯೋಗ ದೊರಕಬೇಕೇ? ಇಲ್ಲಿದೆ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ!!!
ಹಲವು ಅಭ್ಯರ್ಥಿಗಳಿಗೆ ಪಿಯುಸಿ ಮುಗಿಯುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಕೆಲವರು ಡಿಗ್ರಿ ಆಯ್ದುಕೊಂಡರೆ, ಮತ್ತೆ ಕೆಲವರು ಆಸಕ್ತಿಯ ಆಧಾರದಲ್ಲಿ ವ್ಯಾಸಂಗಕ್ಕೆ ತೊಡಗಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕೆಲಸದ ಅನ್ವೇಷಣೆಯೇ ಒಂದು ದೊಡ್ದ ತೊಡಕಾಗಿ ಕೆಲವರಿಗೆ ಪರಿಣಮಿಸುತ್ತದೆ.
ತಮ್ಮ ಆಸಕ್ತಿಯ ವಿಷಯವೇ ಬೇರೆ ಇದ್ದು, ಸಿಗುವ ಹುದ್ದೆಗೂ ಆಸಕ್ತಿಗೂ ಅಜಗಜಾಂತರ ವ್ಯತ್ಯಾಸವಿದ್ದಾಗ, ಕೆಲಸಕ್ಕೆ ಸೇರುವುದೋ ಬೇಡವೋ ಎಂಬ ದ್ವಂದ್ವ ನಿಲುವು ಕಾಡುತ್ತದೆ. ಸರಕಾರಿ ಹುದ್ದೆಯನ್ನು ಅರಸುವವರಿಗೆ ಪರೀಕ್ಷೆಗಳು, ಸಂದರ್ಶನದ ತಲೆಬಿಸಿ ಹೀಗೆ ನಾನಾ ರೀತಿಯ ಗೊಂದಲಗಳು ಉದ್ಯೋಗಾಂಕ್ಷಿಗಳನ್ನೂ ಕಾಡುವುದು ಸಾಮಾನ್ಯ.
ಖಾಲಿ ಹುದ್ದೆಯ ಕಂಡೊಡನೆ ಅರ್ಹತೆ, ಮಾನದಂಡ ಯಾವುದನ್ನು ಪರಿಗಣಿಸದೆ ಅರ್ಜಿ ಹಾಕುವ ಪರಿಪಾಠ ಕೆಲವರಿಗಿದೆ. ಹುದ್ದೆಯ ಪೂರ್ವಾಪರ ವಿಚಾರಗಳ ಬಗ್ಗೆ ವಿವರ ಕಲೆ ಹಾಕದೆ ಅರ್ಜಿ ಸಲ್ಲಿಸಿ ಕೊನೆಗೆ ಹುದ್ದೆ ಅವರಿಗೆ ಸಂಬಂಧಿಸಿದ ಕ್ಷೇತ್ರವಲ್ಲದೆ ಹೋದರೆ ಬೇಸರವಾಗುವುದು ಖಚಿತ.
ಉತ್ತಮ ವೇತನದ ಆಧಾರದಲ್ಲಿ ಗ್ರಾಮಲೆಕ್ಕಿಗನಾಗಲು,
ಗ್ರಾಮಗಳಲ್ಲಿ ಕೆಲಸವನ್ನು ಮಾಡಬಹುದೆಂಬ ಅಭಿಲಾಷೆ ಯಿಂದ ಅನೇಕ ಉದ್ಯೋಗ ಅರಸುವ ಅಭ್ಯರ್ಥಿಗಳು ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ.
ಗ್ರಾಮಲೆಕ್ಕಿಗರಾಗಲು ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ, ವೇತನ ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಸಂಪೂರ್ಣ ವಿವರ ತಿಳಿದು ಅರ್ಜಿ ಸಲ್ಲಿಸುವುದು ಉತ್ತಮ. ಕಂದಾಯ ಇಲಾಖೆಯ ಅಡಿಯಲ್ಲಿ ಗ್ರಾಮಗಳಲ್ಲಿ ಕೆಲಸ ಮಾಡುವವರು ಗ್ರಾಮಲೆಕ್ಕಿಗನಾಗುತ್ತಾರೆ.
ಗ್ರಾಮಲೆಕ್ಕಿಗರು ಜನರಿಂದ ಶುಲ್ಕಗಳನ್ನು ಪಡೆದುಕೊಂಡು ಸರಕಾರಕ್ಕೆ ಕಟ್ಟುವುದು ಮತ್ತು ರೈತರಿಗೆ ಆರ್. ಟಿ. ಸಿ ಬಗ್ಗೆ ವಿಷಯಗಳನ್ನು ತಿಳಿಸುವುದು ಮತ್ತು ಸರ್ವೆ ನಂಬರ್ ಬಗ್ಗೆ ಮಾಹಿತಿಯನ್ನು ಕೊಡುವ ಮತ್ತು ಜಮೀನನ್ನು ಮಾರಾಟ ಮಾಡಲು ಕೂಡ ಸಹಾಯ ಮಾಡುವ ಕಾರ್ಯ ನಿರ್ವಹಿಸುತ್ತಾರೆ.
ಗ್ರಾಮಲೆಕ್ಕಿಗರಾಗಲು ಆಸಕ್ತಿ ಹೊಂದಿರುವವರು ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಸಿ ಅಥವಾ ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಗ್ರಾಮಲೆಕ್ಕಿಗರಾಗಲು ಅಭ್ಯರ್ಥಿಗಳು ಕನಿಷ್ಟ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಗರಿಷ್ಟ 35 ವರ್ಷ, ಓಬಿಸಿ ವರ್ಗದ ಗರಿಷ್ಟ 38 ವರ್ಷ, ಎಸ್ಸಿಎಸ್ಟಿ ವರ್ಗದ ಗರಿಷ್ಟ 40 ವರ್ಷ, ಅಂಗವಿಕಲ ವರ್ಗದ ಗರಿಷ್ಟ 45 ವರ್ಷ, ವಿಧವಾ ಮಹಿಳೆಯರಿಗೆ ಗರಿಷ್ಟ 45 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ ಜೊತೆಗೆ 3 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಗ್ರಾಮಲೆಕ್ಕಿಗರ ಸಂಬಳ ತಿಂಗಳಿಗೆ ರೂ.21,400/- ರಿಂದ 42,000/-ರೂಗಳ ವರೆಗೆ ವೇತನವನ್ನು ಪಡೆಯಬಹುದಾಗಿದೆ.
ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪಿಯುಸಿ ಪರೀಕ್ಷೆ ಅಥವಾ ಸಿ.ಬಿ.ಎಸ್.ಇ ಅಥವಾ ಐ.ಸಿ.ಎಸ್.ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಮಾಡಿದ ನಂತರ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ, ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಒಯ್ಯುವುದು ಅವಶ್ಯಕವಾಗಿದೆ.
ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ವರ್ಗ, 2ಎ,2ಬಿ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 200/-ರೂ ಮತ್ತು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
ಗ್ರಾಮಲೆಕ್ಕಿಗ ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಗಮನಿಸಿ, ಆ ಜಿಲ್ಲೆಯ ಅಧಿಕೃತ ವೆಬ್‌ಸೈಟ್ www revenue dept gov in ಗೆ ಭೇಟಿ ನೀಡಬೇಕು. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಗಳಾದ ಹೆಸರು ಮತ್ತು ನಿಮ್ಮ ವಿಳಾಸ ಹಾಗೂ ಜಾತಿ ಆದಾಯ ಪ್ರಮಾಣ ಪತ್ರದ ಮಾಹಿತಿಯನ್ನು ಕೊಡಬೇಕು ಮತ್ತು ಫೋಟೋ ಅಪ್ಲೋಡ್ ಮಾಡಬೇಕು. ಇನ್ಯಾವುದೇ ರೀತಿಯ ದಾಖಲಾತಿಗಳನ್ನು ಅಪ್ಲೋಡ್ ಮಾಡುವಂತಿರುವುದಿಲ್ಲ.
ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳು ಯಾವುದೇ ರೀತಿಯ ಕರೆಗಳು ಬರುವುದಿಲ್ಲ. ಬದಲಾಗಿ ಆಗಾಗ್ಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಮಾಹಿತಿ ನೋಡಿ ತಿಳಿದುಕೊಳ್ಳಬೇಕು. ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಅಧಿಕೃತ ವೆಬ್ ಸೈಟ್ ನಲ್ಲಿ ಹಾಕಲಾಗುತ್ತದೆ. ಹೆಸರಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮೇಲೆ ತಿಳಿಸಿದ ಅಂಶಗಳನ್ನು ಆಧರಿಸಿ, ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಬಹುದು.