ಭೂಪರಿವರ್ತನೆ ಇನ್ನಷ್ಟು ಸರಳ : ಸುಗ್ರೀವಾಜ್ಞೆ ಮೂಲಕ ವಿಧೇಯಕ ಮಂಡನೆಗೆ ಮುಂದಾದ ಸರಕಾರ
ಬೆಂಗಳೂರು: ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಸರಳವಾಗಿ ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಡಲು ಸರ್ಕಾರ ಮುಂದಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸಾರ್ವಜನಿಕರ ಅನುಕೂಲಕ್ಕಾಗಿ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದರು.
ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ. ನಗರ ಪ್ರದೇಶದಲ್ಲಿ ಭೂ ಪರಿವರ್ತನೆಗೆ ಅರ್ಜಿ ನೀಡಿದ ಏಳು ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಬೇಕು.ಇಲ್ಲವಾದರೆ 15 ದಿನಗಳಲ್ಲಿ ತನ್ನಿಂತಾನೆ ಮಂಜೂರಾತಿ ಸಿಗಲಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲಿ 15 ದಿನಗಳಲ್ಲಿ ವಿಲೇವಾರಿ ಮಾಡದಿದ್ದರೆ ತಿಂಗಳಲ್ಲಿ ಮಂಜೂರಾತಿ ಸಿಕ್ಕಂತಾಗಲಿದೆ ಎಂದು ವಿವರಿಸಿದರು.
ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸುವವರಿಂದ ಪ್ರಮಾಣ ಪತ್ರ ಪಡೆದು ಪರಿವರ್ತನೆ ಮಾಡಿಕೊಡಲಾಗುವುದು. ಸರ್ಕಾರಿ ಜಮೀನು ಆಗಿರಬಾರದು, ಯಾವುದೇ ಯೋಜನೆಗೆ ಸ್ವಾಧೀನ ಮಾಡಿಕೊಂಡಿರಬಾರದು, ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬಂದಿರಬಾರದು ಎಂಬ ಮುಚ್ಚಳಿಕೆ ಪತ್ರ ಪಡೆಯಲಾಗುವುದು ಎಂದರು.
ಒಂದೊಮ್ಮೆ ಅಂತಹ ಜಮೀನು ಪರಿವರ್ತನೆಗೆ ಅರ್ಜಿ ಹಾಕಿದರೂ ನಮ್ಮಲ್ಲಿನ ಕಾವೇರಿ-2 ತಂತ್ರಾಂಶದಲ್ಲಿ ಆ ಜಮೀನಿನ ಸಾಚಾತನ ಗೊತ್ತಾಗಲಿದೆ. ಇದೇ ರೀತಿ ಬಿಡಿ ಬಿಡಿಯಾಗಿ ಕಂದಾಯ ಭೂಮಿಯಲ್ಲಿ ನಕ್ಷೆ ಅಥವಾ ಬಡಾವಣೆ ಮಂಜೂರಾತಿ ಇಲ್ಲದೆ ನಿವೇಶನ ಪಡೆದವರಿಗೂ ಪರಿವರ್ತನೆ ಮಾಡುವ ಬಗ್ಗೆ ಕಾನೂನಿನ ಅವಕಾಶಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು