Women Health: ಕೆಲಸದ ಒತ್ತಡದಿಂದ ಮಹಿಳೆಯರಲ್ಲಿ ಹದಗೆಡುತ್ತಿದೆ ಲೈಂಗಿಕ ಆರೋಗ್ಯ | ಬಂಜೆತನಕ್ಕೆ ಕಾರಣವಾಯಿತೇ ಈ ಒತ್ತಡ? ಸಮೀಕ್ಷೆ
ಇತ್ತೀಚೆಗೆ ಅನೇಕ ಕಂಪನಿಗಳು ಹೆಣ್ಮಕ್ಕಳಿಗೆ ಕೆಲಸ ಕೊಡುವುದಿಲ್ಲ. ಮದುವೆಯಾಗಿ ಮಕ್ಕಳಾಗಿರುವ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಮೇಯವನ್ನು ಸಂಸ್ಥೆಗಳು ವಹಿಸುತ್ತಿಲ್ಲ. ಮದುವೆಯಾದ್ರೆ, ಮಕ್ಕಳಾದ್ರೆ ವೃತ್ತಿ ಜೀವನ ಹಾಳಾಗುತ್ತೆ ಎನ್ನುವ ಭಯ ಇತ್ತೀಚೆಗೆ ಅನೇಕ ಮಹಿಳೆಯರಿಗೆ ಕಾಡುತ್ತಲಿರುತ್ತೆ. ಹಾಗಾಗಿಯೇ ಇತ್ತೀಚೆಗೆ ಮಹಿಳೆಯರ ಉದ್ಯೋಗದಲ್ಲಿ ಭಾರೀ ಕುಸಿತವಾಗಿದೆ.
ಈ ಎಲ್ಲಾ ಸಮಸ್ಯೆಯಿಂದಾಗಿಯೇ ಅನೇಕ ಮಂದಿ ಹುಡುಗಿಯರು ಮದುವೆಯಾಗಲು ಹಾಗೂ ಮಕ್ಕಳನ್ನು ಪಡೆಯಲು ಮನಸ್ಸು ಮಾಡುತ್ತಿಲ್ಲ. ಇದು ಮಹಿಳೆಯರ ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗುತ್ತಿದೆ. ಇದರಿಂದ ಮಾನಸಿಕ ಆರೋಗ್ಯ ಮಾತ್ರವಲ್ಲ ಲೈಂಗಿಕ ಜೀವನದ ಮೇಲೂ ಇದರ ಪರಿಣಾಮ ಹರಡುತ್ತಿದೆ. ಭಾರತದಲ್ಲಿ ಲಕ್ಷಾಂತರ ಮಹಿಳೆಯರು ವೃತ್ತಿಪರದ ಹೊರೆಯ ಕಾರಣದಿಂದ ಮಾನಸಿಕ ಹಾಗೂ ಲೈಂಗಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಂದು ವರದಿಗಳು ಹೇಳಿವೆ.
ವಿಶ್ವ ಬ್ಯಾಂಕ್ (World Bank) ಅಂಕಿ ಅಂಶಗಳ ಪ್ರಕಾರ, ಕೊರೊನಾದಿಂದ ಮಹಿಳೆ ಉದ್ಯೋಗದಲ್ಲಿ ಏರುಪೇರಾಗುತ್ತಿದೆ. ಭಾರತದಲ್ಲಿ ಮಹಿಳಾ ಉದ್ಯೋಗ 2022 ರಲ್ಲಿ ಶೇಕಡಾ 9 ರಷ್ಟು ಕಡಿಮೆಯಾಗಿದೆ. ಮಹಿಳೆಯರಲ್ಲಿ ಒತ್ತಡ ಹೆಚ್ಚಾಗಲು ಇದು ಮುಖ್ಯ ಕಾರಣಗಳಲ್ಲಿ ಒಂದು. ಅನೇಕ ಕಾರಣಗಳಿಂದ ಮಹಿಳಾ ಉದ್ಯೋಗಿಗಳಲ್ಲಿ ಒತ್ತಡ ಹೆಚ್ಚಾಗಿದೆ. ಈ ಒತ್ತಡ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದೆ.
ಕೆಲಸದ ಒತ್ತಡ ಹೆಚ್ಚಾದಂತೆ ಮಹಿಳೆಯರ ಲೈಂಗಿಕ ಆರೋಗ್ಯ ಹಾಳಾಗಲು ಕಾರಣವಾಗಿದೆ. ಇದು ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡೋಮ್ (ಪಿಸಿಓಎಸ್), ಎಂಡೊಮೆಟ್ರಿಯೊಸಿಸ್ ನಂತಹ ಸಮಸ್ಯೆ ಕೆಲಸ ಮಾಡುವ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತವೆ. ಉದ್ಯೋಗಸ್ಥ ಮಹಿಳೆಯರ ಆರೋಗ್ಯ ಸುಧಾರಿಸಲು ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ. ಹೆರಿಗೆ ರಜೆ, ಅವಧಿ ರಜೆಗಳನ್ನು ನೀಡ್ತಿದೆ. ಆದ್ರೂ ಮಹಿಳೆಯರ ಒತ್ತಡ ಕಡಿಮೆಯಾಗಿಲ್ಲ.
NCBI 2018 ರಲ್ಲಿ ಉದ್ಯೋಗಸ್ಥ ಮಹಿಳೆಯರು ಮತ್ತು ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯದ ಬಗ್ಗೆ ಸಮೀಕ್ಷೆಯ ಕುರಿತು ವರದಿ ಮಾಡಿತ್ತು. ಇಲ್ಲಿ ಕೆಲಸ ಮಾಡುವ ಮಹಿಳೆಯರಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಈ ವರದಿಯ ಪ್ರಕಾರ ಶೇಕಡಾ 52ರಷ್ಟು ಮಹಿಳೆಯರು ಕೆಲಸದ ಜೊತೆ ತಮ್ಮ ಆರೋಗ್ಯವನ್ನು ನಿರ್ವಹಿಸಲು ಹೆಣಗಾಡ್ತಿದ್ದಾರೆ ಎಂಬ ಶಾಕಿಂಗ್ ಸಮಾಚಾರ ತಿಳಿದು ಬಂದಿದೆ.
ಇಲ್ಲಿ ಮುಖ್ಯವಾಗಿ ಮಾನಸಿಕ ಆರೋಗ್ಯ ಬಹಳ ಮುಖ್ಯ. ಮಾನಸಿಕ ಆರೋಗ್ಯ ಹದಗೆಟ್ಟಾಗ ದೈಹಿಕ ಆರೋಗ್ಯ ಹಾಳಾಗುತ್ತದೆ. ಇದರಿಂದ ಲೈಂಗಿಕ ಜೀವನ ಕೂಡ ಹದಗೆಡುತ್ತದೆ. ಲೈಂಗಿಕ ಜೀವನದ ಜೊತೆಗೆ ಸಂತಾನೋತ್ಪತ್ತಿ ಉಂಟಾಗಲು ಆರೋಗ್ಯಕರ ಮನಸ್ಸು ಬೇಕು. ಆದರೆ ಭಾರತದಲ್ಲಿ ಇತ್ತೀಚೆಗೆ ಪಿಸಿಒಎಸ್ ಸಮಸ್ಯೆ ಹೆಚ್ಚಿದೆ. ಅಂದರೆ, ಪ್ರತಿ ಐವರಲ್ಲಿ ಒಬ್ಬ ಮಹಿಳೆಗೆ ಈ ಪಿಸಿಒಎಸ್ ಕಾಡ್ತಿದೆ. ಅಂದ್ರೆ ಶೇಕಡಾ 20ರಷ್ಟು ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ. ಪಿಸಿಒಎಸ್ ಬಂಜೆತನಕ್ಕೆ ಪ್ರಮುಖ ಕಾರಣವೆಂದೇ ಹೇಳಬಹುದು. ಅಂಡೋತ್ಪತ್ತಿ ಬಂಜೆತನಕ್ಕೆ ಶೇಕಡಾ 80ರಷ್ಟು ಕಾರಣ ಪಿಸಿಒಎಸ್ ಎಂಬುದು ಪತ್ತೆಯಾಗಿದೆ.
ಈಗ ತಂತ್ರಜ್ಞಾನ ವೇಗವಾಗಿ ಬೆಳೆದಿರುವುದರಿಂದ ಮಕ್ಕಳನ್ನು ಪಡೆಯೋದು ಕಷ್ಟದ ಕೆಲಸ ಅಲ್ಲವೆಂದೇ ಎನ್ನಬಹುದು. ಆದರೆ ಐವಿಎಫ್ ಮೂಲಕ ಮಕ್ಕಳನ್ನು ಪಡೆಯೋದು ಅಷ್ಟೊಂದು ಸುಲಭ ಅಲ್ಲ. ಭಾರತದಲ್ಲಿ ಐವಿಎಫ್ ಚಿಕಿತ್ಸೆ ಬಹಳ ದುಬಾರಿ. ಅಷ್ಟು ಮಾತ್ರವಲ್ಲದೇ ಕಾರ್ಪೋರೇಟ್ ಗ್ರೂಪ್ ಇದನ್ನು ವಿಮಾ ಪಾಲಿಸಿಯಡಿ ಸೇರಿಸಿಲ್ಲ. ಹಾಗಾಗಿ, ಸಾಮಾನ್ಯ ಮಹಿಳೆಯರು ಮಾತ್ರವಲ್ಲ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಈ ಚಿಕಿತ್ಸೆ ದುಬಾರಿ ಎಂದೇ ಹೇಳಬಹುದು.
ಹಾಗಾಗಿ ಏನೇ ಆಗಲಿ ಬಂಜೆತನ ಸಮಸ್ಯೆಯಿಂದ ದೂರವಿರಬೇಕು, ಸಂತಾನೋತ್ಪತ್ತಿ ಸುಲಭವಾಗಬೇಕು ಎಂದಾದರೆ ಅದು ಯಾವುದೇ ಮಹಿಳೆಯರು ಇರಲಿ ಕಾರ್ಪೋರೇಟ್ ವಲಯದ ಮಹಿಳೆಯರು ಅಥವಾ ಸಾಮಾನ್ಯ ಮಹಿಳೆಯರು ಒತ್ತಡ ಜೀವನದಿಂದ ಹೊರಗೆ ಬರುವುದು ಬಹಳ ಮುಖ್ಯ.