Tulu language | ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಅತಿ ಶೀಘ್ರದಲ್ಲಿ: ವಿ. ಸುನಿಲ್ ಕುಮಾರ್ ಭರವಸೆ
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ, ಇಂಧನ ಹಾಗೂ ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ (V Sunil Kumar) ಅವರು ತುಳು ಭಾಷೆಯನ್ನು (Tulu language) ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ನಿಟ್ಟಿನಲ್ಲಿ ರಾಜ್ಯದ ಶಿಫಾರಸು ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ಗೃಹ ಸಚಿವರಿಗೂ ಮನವರಿಕೆ ಮಾಡಲಾಗಿದ್ದು, ಶೀಘ್ರವೇ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಲಭಿಸಲಿದೆ ಎಂದು ಹೇಳಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ 2021ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭ, ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರ ಪ್ರದಾನ ನೆರವೇರಿಸಿ ಅವರು ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ಸುಲಭದ ಕಾರ್ಯವಲ್ಲ. ಬೇರೆ ಬೇರೆ ಭಾಷೆಗಳು ಈ ನಿಟ್ಟಿನಲ್ಲಿ ಪಟ್ಟಿಯಲ್ಲಿವೆ. ಇದೀಗ ಒಟ್ಟಾಗಿ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಶೀಘ್ರ ಇದಕ್ಕೆ ಉತ್ತರ ದೊರೆಯಲಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗಾಗಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಉತ್ತಮ ಅನುದಾನ ಹಾಗೂ ಸಹಕಾರ ನೀಡಿದ್ದಾರೆ. ಸುಸಜ್ಜಿತ ತುಳುಭವನ ಸಾಕಾರವಾಗುತ್ತಿದೆ ಎಂದು ಹೇಳಿದ್ದಾರೆ.