Navaratri Colours 2022 : 9 ದಿನವೂ ಯಾವ ಬಣ್ಣದ ಬಟ್ಟೆ ಧರಿಸಬೇಕು? ಈ ಬಣ್ಣಗಳ ಮಹತ್ವ ತಿಳಿಯಿರಿ
ನವರಾತ್ರಿ ಆಚರಣೆಗೆ ಕ್ಷಣಗಣನೆ ಆಂಭವಾಗುತ್ತಿದ್ದಂತೆ, ಹೆಚ್ಚಿನ ಹಿಂದೂ ಮನೆಗಳಲ್ಲಿ ನವರಾತ್ರಿ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗುತ್ತಿದೆ. ನವರಾತ್ರಿ ಹಬ್ಬವನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಒಂದು ಚೈತ್ರ ನವರಾತ್ರಿ ಮತ್ತು ಇನ್ನೊಂದು ಶಾರದೀಯ ನವರಾತ್ರಿ ಎಂದು ಆಚರಿಸಲಾಗುತ್ತದೆ. ನವರಾತ್ರಿ ಎಂಬ ಪದವು ಒಂಭತ್ತು ರಾತ್ರಿಗಳು ಎನ್ನುವ ಸಂಸ್ಕೃತ ಅರ್ಥವನ್ನು ಹೊಂದಿದೆ. ಈ ವರ್ಷ ಶರದ್ ನವರಾತ್ರಿಯು ಸೋಮವಾರ ಸೆಪ್ಟೆಂಬರ್ 26 ರಂದು ಪ್ರಾರಂಭವಾಗಲಿದ್ದು ಮಂಗಳವಾರ ಅಕ್ಟೋಬರ್ 4 ರಂದು ಕೊನೆಗೊಳ್ಳುತ್ತದೆ.
ನವರಾತ್ರಿಯನ್ನು ಮಂಗಳಕರ ಹಬ್ಬವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ವೇಳೆ ದುರ್ಗಾ ದೇವಿಯು ರಾಕ್ಷಸ ಮಹಿಸಾಸುರನನ್ನು ಸೋಲಿಸಿ ಕೊಂದು ಜಗತ್ತನ್ನು ದುಷ್ಟ ಶಕ್ತಿಯಿಂದ ರಕ್ಷಿಸಿದ ಪ್ರತೀತಿ ಇದ್ದು, ದುರ್ಗಾ ದೇವಿಯು ದುಷ್ಟ ಮತ್ತು ದುಷ್ಟತನದ ನಕಾರಾತ್ಮಕ ಶಕ್ತಿಗಳ ವಿರುದ್ಧ ಬಳಸಲಾಗುವ ದೈವಿಕ ಶಕ್ತಿಗಳು, ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಹೀಗಾಗಿ ದುರ್ಗೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.ಈ ವಿಶೇಷವಾದ 9 ದಿನವೂ ಭಕ್ತಾದಿಗಳು,ದೇವಿ ದುರ್ಗೆಗೆ ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸಿ ಆರಾಧನೆ ಮಾಡುವುದರಿಂದ ವೈಷ್ಣೋದೇವಿ ಪ್ರಸನ್ನಳಾಗಿ ಭಕ್ತರ ಇಷ್ಟಾರ್ಥ ಸಿದ್ಧಿಯಾಗಿ, ಮನೆಯಲ್ಲಿ ಸುಖ,ನೆಮ್ಮದಿ, ಸಮೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ನವರಾತ್ರಿಯ ಪ್ರತಿ ದಿನವೂ ಕೆಲವು ವಿಶೇಷತೆಯನ್ನು ಹೊಂದಿರುತ್ತದೆ. ನವರಾತ್ರಿಯ ಈ 9 ದಿನಗಳಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಮೊದಲ ದಿನ- ನವರಾತ್ರಿಯ ಮೊದಲ ದಿನ, ಶೈಲಪುತ್ರಿ, ದುರ್ಗಾ ದೇವಿಯ ಮೊದಲ ರೂಪವನ್ನು ಪೂಜಿಸಲಾಗುತ್ತದೆ. ದೇವಿ ಶೈಲಪುತ್ರಿಗೆ ಹಳದಿ ಬಣ್ಣ ತುಂಬಾ ಇಷ್ಟವಾಗಿದ್ದು, ಹಳದಿ ಬಣ್ಣ, ಅದೃಷ್ಟ ಮತ್ತು ಸಂತೋಷದ ಸಾಧನೆಗೆ ಪ್ರೇರಣೆಯಾಗಿದೆ. ಹಾಗಾಗಿ ಅಂದು ಹಳದಿ ಬಣ್ಣದ ಮಡಿ ವಸ್ತ್ರ ಧರಿಸಿ ಪೂಜೆ ಸಲ್ಲಿಸೋದು ಶುಭಕರ ಎಂದು ನಂಬಲಾಗಿದೆ.
ಎರಡನೇ ದಿನ- ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಶ್ವೇತವಸ್ತ್ರ ಧಾರಿಣಿಯಾಗಿರುವ ಬ್ರಹ್ಮಚಾರಿಣಿ ದೇವಿ ಭಕ್ತರಿಗೆ ಸಂತೋಷ ಮತ್ತು ಜ್ಞಾನವನ್ನು ನೀಡುತ್ತಾಳೆ. ಈ ದಿನ ಹಸಿರು ವರ್ಣದ ಬಟ್ಟೆ ಧರಿಸಬೇಕು. ಹಸಿರುವ ಬೆಳವಣಿಗೆ, ಪ್ರಕೃತಿ, ಪರಿಸರದ ಸಂಕೇತವಾಗಿದೆ. ನವರಾತ್ರಿಯ 2 ನೇ ದಿನದಂದು ಹಸಿರು ಧರಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಮೂರನೇ ದಿನ- ಚಂದ್ರಘಂಟಾ ದೇವಿಯು ದುರ್ಗಾ ದೇವಿಯ ಮೂರನೇ ರೂಪವಾಗಿದ್ದು, ನವರಾತ್ರಿಯ ಮೂರನೇ ದಿನ ದುರ್ಗಾಮಾತೆಯನ್ನು ಚಂದ್ರಘಂಟಾ ರೂಪದಲ್ಲಿ ಪೂಜಿಸಲಾಗುತ್ತದೆ. ಚಂದ್ರಘಂಟೆ ದೇವಿ ಅರ್ಧ ಚಂದ್ರನ ತಿಲಕವನ್ನು ಹಣೆಯಲ್ಲಿ ಧರಿಸಿದ್ದು, ಬೂದು ಬಣ್ಣ ಮನಸ್ಸಿನ ಭಾವನೆಗಳ ಸಂಕೇತವಾಗಿದೆ. ಹಾಗಾಗಿ ಮೂರನೇ ದಿನ ಬೂದು ಬಣ್ಣದ ಬಟ್ಟೆ ಧರಿಸುವುದರಿಂದ ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳನ್ನು ತಾಯಿ ಹೊಡೆದು ಹಾಕುತ್ತಾಳೆ ಅನ್ನೋದು ನಂಬಿಕೆಯಾಗಿದೆ.
ನಾಲ್ಕನೇ ದಿನ – ನವರಾತ್ರಿಯ ನಾಲ್ಕನೇ ದಿನ ದೇವಿ ಕೂಷ್ಮಾಂಡವನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೂಷ್ಮಾಂಡದೇವಿಯನ್ನು ಪೂಜಿಸಲಾಗುತ್ತದೆ. ಸೂರ್ಯನು ಪ್ರಕಾಶಮಾನವಾಗಿ ಮತ್ತು ಭೂಮಿಗೆ ಬೆಳಕು ನೀಡುವಂತೆ ಕೂಷ್ಮಾಂಡದೇವಿ ನೋಡಿಕೊಳ್ಳುತ್ತಾಳೆ ಎಂದು ಬಲವಾಗಿ ನಂಬಲಾಗಿದೆ.ಹಾಗಾಗಿ ಸೂರ್ಯನ ಪ್ರತೀಕವಾದ ಕೇಸರಿ ವಸ್ತ್ರ ಶುಭವಾಗಿದೆ.ಈ ದಿನ ಕೇಸರಿ/ಕಿತ್ತಳೆ ಬಣ್ಣ ಉಡುಪು ಧರಿಸಿ ಪೂಜೆ ಸಲ್ಲಿಸಬೇಕು. ಇದಲ್ಲದೆ, ಈ ಬಣ್ಣವು ಪ್ರಕಾಶಮಾನತೆ, ಜ್ಞಾನ ಮತ್ತು ಶಾಂತಿಯನ್ನು ಕೂಡ ಸೂಚಿಸುತ್ತದೆ.
ಐದನೇ ದಿನ- ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ತಾಯಿ ಪುತ್ರನಾದ ಸ್ಕಂದನನ್ನು ತೊಡೆಯ ಮೇಲೆ ಕೂರಿಸಿಕೊಂಡಿರುತ್ತಾಳೆ. ಈ ದಿನದ ಪೂಜೆ ತಾಯಿ-ಮಗನ ನಡುವಿನ ಪ್ರೀತಿಯ ಸಂಕೇತವನ್ನು ಬಿಂಬಿಸುತ್ತದೆ. ಸ್ಕಂದಮಾತೆಗೆ ಇಷ್ಟವಾದ ಬಿಳಿ/ಶ್ವೇತ ಬಣ್ಣದ ಬಟ್ಟೆ ಧರಿಸಿ ಪೂಜೆ ಸಲ್ಲಿಸುವುದು ಶುಭಕರ ಎಂದು ಬಲವಾಗಿ ನಂಬಲಾಗಿದೆ.
ಆರನೇ ದಿನ- ನವರಾತ್ರಿಯ ಆರನೇ ದಿನದಂದು ದೇವಿ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ಈಕೆಯನ್ನು ಬ್ರಹ್ಮಾಂಡದಲ್ಲಿ ಪ್ರಧಾನ ದೇವತೆಯನ್ನಾಗಿ ಪರಿಣಿಸಲಾಗುತ್ತದೆ ಅಲ್ಲದೆ, ದುರ್ಗಾದೇವಿಯ ಉಗ್ರಸ್ವರೂಪ ರೂಪವೇ ಕಾತ್ಯಾಯಿನಿ. ದೇವತೆಗಳ ಕೋಪದಿಂದ ಕಾತ್ಯಾಯಿನಿ ದೇವಿಯ ಉಗಮವಾಗಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದ್ದು, ಕೆಂಪು ಬಣ್ಣವನ್ನು ತಾಯಿಯ ಕೋಪಕ್ಕೆ ಹೋಲಿಸಲಾಗುತ್ತದೆ. ದೇವಿ ಕಾತ್ಯಾಯನಿಗೆ ಕೆಂಪು ಬಣ್ಣ ತುಂಬಾ ಇಷ್ಟವಾಗಿದ್ದು, ಹಾಗಾಗಿ ಈ ದಿನದಂದು ಜನರು ಕೆಂಪು ವಸ್ತ್ರಗಳನ್ನು ಧರಿಸಿ ದೇವಿಯನ್ನು ಪೂಜಿಸುವುದು ಒಳ್ಳೆಯದು.
ಏಳನೇ ದಿನ- ನವರಾತ್ರಿಯ ಏಳನೇ ದಿನದಂದು ದೇವಿ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಕಾಳಿಯ ದೇವಿಯ ಮತ್ತೊಂದು ಸ್ವರೂಪವೇ ಕಾಳರಾತ್ರಿ. ಈ ದೇವಿಯನ್ನು ಶಕ್ತಿ ಸ್ವರೂಪಿಣಿ ಎಂದು ಕೂಡ ಕರೆಯಲಾಗುತ್ತದೆ. ರಕ್ತಬೀಜಾಸುರನ ವಧಿಸುವ ಸಲುವಾಗಿ ದುರ್ಗೆಯು ಕಾಳರಾತ್ರಿ ಸ್ವರೂಪದಲ್ಲಿ ಅವತರಿಸುತ್ತಾಳೆ ಎಂಬ ನಂಬಿಕೆಯಿದೆ. ಈ ದಿನ ಭಕ್ತರು ದೇವಿ ಕಾಳರಾತ್ರಿಯನ್ನು ಪೂಜಿಸಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.
ಎಂಟನೇ ದಿನದಂದು ಮಾಹಾಗೌರಿಯ ಆರಾಧನೆ ಮಾಡಲಾಗುತ್ತದೆ. ನವರಾತ್ರಿಯ ಪ್ರಮುಖ ದಿನಗಳಲ್ಲಿ ಅಷ್ಟಮಿಯೂ ಒಂದಾಗಿದ್ದು, ದುರ್ಗೆಯ ಎಂಟನೇ ರೂಪವಾದ ಮಹಾಗೌರಿಯನ್ನು ಈ ದಿನ ಪೂಜಿಸಲಾಗುತ್ತದೆ. ಮಹಾಗೌರಿ ತಾಯಿ ಭಕ್ತರ ಬೇಡಿಕೆಗಳನ್ನು ಬೇಗ ಪೂರೈಸುತ್ತಾಳೆ ಎಂಬ ನಂಬಿಕೆ ಇದೆ
ಈ ದಿನದಂದು ಗುಲಾಬಿ ಅಥವಾ ತಿಳಿ ಗುಲಾಬಿ ಬಣ್ಣದ ಬಟ್ಟೆ ಧರಿಸಬೇಕು. ಗುಲಾಬಿ ಬಣ್ಣ ನಂಬಿಕೆ ಮತ್ತು ಹೊಸ ದೃಷ್ಟಿಕೋನ, ಸ್ವಯಂ ಪರಿಷ್ಕರಣೆ ಮತ್ತು ಸಾಮಾಜಿಕ ಉನ್ನತಿಯನ್ನು ಪ್ರತಿನಿಧಿಸುತ್ತದೆ.
ಒಂಬತ್ತನೇ ದಿನ- ನವರಾತ್ರಿಯ ಒಂಬತ್ತನೇ ದಿನದಂದು ದುರ್ಗಾ ದೇವಿಯ ಒಂಬತ್ತನೇ ರೂಪ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಸಕಲ ಸಿದ್ಧಿಗಳ ಮಗಳಾದ ಸಿದ್ಧಿದಾತ್ರಿಯ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ನವರಾತ್ರಿ ಎಂಬ ವೈಭವೋಪೇತ ಹಬ್ಬವನ್ನು , ನವ ಬಣ್ಣದ ಬಟ್ಟೆಗಳ ಧರಿಸಿ, ದೇವಿಯನ್ನು ಆರಾಧಿಸಿ ದೇವಿ ಕೃಪೆಗೆ ಪಾತ್ರರಾಗಬಹುದು.