ಮಂಗಳೂರು: ಹಾಸ್ಟೆಲ್ ನಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು ಪತ್ತೆ | ಕಾರಣ ಬಿಚ್ಚಿಟ್ಟ ವಿದ್ಯಾರ್ಥಿನಿಯರು

ಮಂಗಳೂರು : ತಾಲೂಕಿನ ನಗರದ ಪದವಿ ಪೂರ್ವ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೇ ಈ ನಾಪತ್ತೆ ಪ್ರಕರಣಕ್ಕೆ ಕಾರಣ ಎಂದು ಗೊತ್ತಾಗಿದೆ.

 

ಮೇರಿಹಿಲ್‌ನಲ್ಲಿರುವ ಕಾಲೇಜಿನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಕಾರಣ ಬಿಚ್ಚಿಟ್ಟಿದ್ದಾರೆ.

ಮಂಗಳೂರು ದಕ್ಷಿಣ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸರ ತಂಡವು ಚೆನ್ನೈಗೆ ತೆರಳಿ, ವಿದ್ಯಾರ್ಥಿನಿಯರನ್ನು ಅವರ ಪೋಷಕರ ಜೊತೆ ಮಂಗಳೂರಿಗೆ ಕರೆ ತಂದಿದೆ.

‘ಈ ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬ ವಿದ್ಯಾರ್ಥಿನಿಯ ಪೋಷಕರು ಚೆನ್ನೈಯಲ್ಲಿ ವಾಸಿಸುತ್ತಿದ್ದಾರೆ. ಕಡಿಮೆ ಅಂಕ ಬಂದ ಕಾರಣಕ್ಕೆ ನೊಂದು ಕಾಲೇಜು ತೊರೆಯಲು ಬಯಸಿದ್ದ ವಿದ್ಯಾರ್ಥಿನಿಯರು ಚೆನ್ನೈಗೆ ತೆರಳಲು ನಿರ್ಧರಿಸಿದ್ದರು. ಎಲ್ಲಿಯೂ ಉಳಿದುಕೊಳ್ಳದೇ ಬಸ್ ಹಾಗೂ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದರು. ಒಂದು ದಿನ ಪ್ರಯಾಣದ ನಂತರ ಮೂವರು ವಿದ್ಯಾರ್ಥಿನಿಯರಿಗೆ ತಾವು ಮಾಡಿದ್ದು ತಪ್ಪು ಎಂಬ ಅರಿವಾಗಿದೆ. ಆದರೆ ತಮ್ಮ ತಂದೆ ತಾಯಿಯರನ್ನು ಸಂಪರ್ಕ ಮಾಡೋಣವೆಂದರೆ ಅವರ ಬಳಿ ಮೊಬೈಲ್ ಕೂಡ ಇರಲಿಲ್ಲ. ಹೀಗಾಗಿ ದಾರಿ ಕಾಣದೆ, ಯಾವುದಾದರೂ ಪೊಲೀಸ್ ಠಾಣೆಗೆ ತಲುಪಿಸುವಂತೆ ಚೆನ್ನೈನ ಆಟೊರಿಕ್ಷಾ ಚಾಲಕರೊಬ್ಬರ ಬಳಿ ಕೇಳಿಕೊಂಡಿದ್ದರು. ನಂತರ ಪೊಲೀಸ್ ಠಾಣೆಗೆ ತಲುಪಿದ ಬಳಿಕ ಪೋಷಕರನ್ನು ಸಂಪರ್ಕಿಸಿದ್ದರು. ಅಷ್ಟರಲ್ಲಾಗಲೇ ಚೆನ್ನೈ ತಲುಪಿದ್ದ ಪೊಲೀಸರ ತಂಡವೂ ಅಲ್ಲಿನ ಠಾಣೆಯ ಪೊಲೀಸರನ್ನು ಸಂಪರ್ಕಿಸಿತ್ತು. ಅಲ್ಲಿಗೆ ಪೋಷಕರನ್ನು ಕರೆಸಿಕೊಂಡ ಪೊಲೀಸರು ವಿದ್ಯಾರ್ಥಿನಿಯರನ್ನು ನಗರಕ್ಕೆ ಶುಕ್ರವಾರ ರಾತ್ರಿ ಕರೆತಂದಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.

Leave A Reply

Your email address will not be published.