KCET : ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಲು ಸೂಚನೆ, ಗೊಂದಲ ಇತ್ಯರ್ಥ, 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18 ಮಾರ್ಕ್ಸ್‌ ಕಟ್‌

ಒಂದೂವರೆ ತಿಂಗಳ ನಂತರ ಸಿಇಟಿ ( CET) ರ‌್ಯಾಂಕಿಂಗ್ ಗೊಂದಲಕ್ಕೆ ಪರಿಹಾರ ಸಿಕ್ಕಿದೆ. ಸಿಇಟಿ ಫಲಿತಾಂಶ (CET Results) ಪ್ರಕಟವಾದ ಒಂದೂವರೆ ತಿಂಗಳ ನಂತರ ಕೊನೆಗೂ ಸಮಸ್ಯೆ ಬಗೆಹರಿದಿದೆ ಎಂದೇ ಹೇಳಬಹುದು.

 

2021ನೇ ಸಾಲಿನ ಪಿಯುಸಿ (PUC) ವಿದ್ಯಾರ್ಥಿಗಳ 18 ಅಂಕ ಕಡಿತಗೊಳಿಸಿ, 2022ನೇ ಸಾಲಿನ ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ನೇತೃತ್ವದ ಸಮಿತಿ ಸಲಹೆ ನೀಡಿದ್ದು, ಹೈಕೋರ್ಟ್‌ ಇದನ್ನು ಮಾನ್ಯ ಕೂಡಾ ಮಾಡಿದೆ. ಇದೇ ವಿಧಾನ ಅಳವಡಿಸಿಕೊಂಡು ಹೊಸದಾಗಿ ಸಿಇಟಿ ರ‌್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್‌ ಶುಕ್ರವಾರ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಆದೇಶ ನೀಡಿದೆ.

ಸರಕಾರ ಕೂಡಾ ಒಪ್ಪಿಗೆ ಸೂಚಿಸಿದ ಬೆನ್ನಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ), ಸೆ.29ರಂದು ಪರಿಷ್ಕೃತ ರ‌್ಯಾಂಕಿಂಗ್‌ ಪಟ್ಟಿ ಪ್ರಕಟಿಸಿ, ಅ.3ರಿಂದಲೇ ಕೌನ್ಸೆಲಿಂಗ್‌ ನಡೆಸುವುದಾಗಿ ಘೋಷಣೆ ಮಾಡಿದೆ.

ಉನ್ನತ ಶಿಕ್ಷಣ ಇಲಾಖೆಯು ಜು.30ರಂದು ಸಿಇಟಿ-2022ರ ಫಲಿತಾಂಶವನ್ನು ಪ್ರಕಟಗೊಳಿಸಿತ್ತು. ಆದರೆ ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಸಿಇಟಿಗೆ ತಮ್ಮ ಪಿಯು ಅಂಕಗಳನ್ನು ಪರಿಗಣಿಸಿಲ್ಲಎಂಬ ಕಾರಣದಿಂದ ಹೈಕೋರ್ಟ್‌ ಮೆಟ್ಟಲೇರಿದ್ದರು. ನಂತರ ಕೋರ್ಟ್‌ ಸೆ.3ರಂದು ತೀರ್ಪು ಪ್ರಕಟಿಸಿತ್ತು. ಹೊಸದಾಗಿ ರ‌್ಯಾಂಕ್ ಪಟ್ಟಿ ಪ್ರಕಟಿಸುವಂತೆ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ಹಂಗಾಮಿ ಸಿಜೆ ಅಲೋಕ್‌ ಅರಾಧೆ ಹಾಗೂ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಸರಕಾರದ ಪರ ವಾದಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಬಿ.ತಿಮ್ಮೇಗೌಡ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಕೆ ಮಾಡಿದ್ದಾರೆ.

ಸಮಿತಿ ಸೂಚಿಸಿರುವ ವಿಧಾನಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರೂ ಸಮ್ಮತಿಸಿದರು. ಅದನ್ನು ಪರಿಗಣಿಸಿದ ಪೀಠ, ಸಮಿತಿ ಸೂಚಿಸಿರುವ ವಿಧಾನವನ್ನು ಅಳವಡಿಸಿಕೊಂಡು, ಹೊಸದಾಗಿ ಸಿಇಟಿ ರ‌್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಸೂಚಿಸಿ, ಮೇಲ್ಮನವಿಯನ್ನು ಇತ್ಯರ್ಥಪಡಿಸಿತು.

ಪರಿಹಾರ ಯಾವ ರೀತಿ?

ಪಿಯು ವಿದ್ಯಾರ್ಥಿಗಳಿಗೆ ( 2021 ರ ಪಿಯು ವಿದ್ಯಾರ್ಥಿಗಳು) 3 ವಿಷಯಗಳಿಂದ ಒಟ್ಟು 18 ಅಂಕಗಳನ್ನು ಕಡಿತಗೊಳಿಸಿ ಸಾಮಾನ್ಯೀಕರಿಸಬೇಕು.

ಭೌತಶಾಸ್ತ್ರದ ಸರಾಸರಿ 6 ಅಂಕ, ರಸಾಯನ ಶಾಸ್ತ್ರದ 5 ಅಂಕ ಹಾಗೂ ಗಣಿತದ 7 ಅಂಕಗಳನ್ನು ಕಡಿತ. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆ.

ಇದಾದ ಬಳಿಕ 2021ನೇ ಸಾಲಿನ ವಿದ್ಯಾರ್ಥಿಗಳ ಒಟ್ಟು ಪಿಯು ಅಂಕಗಳ ಶೇ. 50 ಹಾಗೂ 2022ರ ಸಿಇಟಿಯಲ್ಲಿ ಪಡೆದ ಶೇ. 50 ಅಂಕ ಪರಿಗಣಿಸಿ ರ‌್ಯಾಂಕಿಂಗ್‌ ಪಟ್ಟಿ ಪ್ರಕಟಿಸಬೇಕು.

ಕೋವಿಡ್‌ ನಂತರದ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಇಂದರಿಂದ ರ‌್ಯಾಂಕಿಂಗ್‌ ಮೇಲೆ ಕೊಂಚಮಟ್ಟಿಗೆ ಪರಿಣಾಮ ಬೀರಬಹುದು. ಈ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿರಿಸಿಕೊಂಡು ಕಾಲೇಜುಗಳಲ್ಲಿ ಐಟಿ ಸಂಬಂಧಿತ ವಿಭಾಗದಲ್ಲಿ ಕಳೆದ ಸಾಲಿನಲ್ಲಿದ್ದ ಸೀಟುಗಳ ಸಂಖ್ಯೆಯನ್ನು ಈ ವರ್ಷ ಶೇ.10 ಹೆಚ್ಚಳ ಮಾಡಬಹುದು

Leave A Reply

Your email address will not be published.