ವಾಟ್ಸಪ್ ಬಳಕೆದಾರರೇ ಎಚ್ಚರ | ನಿಮಗೂ ಬರಬಹುದು ಈತರದ ಮೆಸೇಜ್!
ಇಂದಿನ ಕಾಲ ಹೇಗೆ ಆಗಿದೆ ಅಂದ್ರೆ ಟೆಕ್ನಾಲಜಿ ಏನೋ ಮುಂದುವರಿದಿದೆ. ಅದರಂತೆ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಯುಪಿಐ ನಂತಹ ಡಿಜಿಟಲ್ ಪಾವತಿಗಳು ಬಂದ ಮೇಲಂತೂ ಜನರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಆದ್ರೆ ಇದನ್ನೇ ಬಂಡವಾಳವಾಗಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ.
ಹೌದು. ಬ್ಯಾಂಕ್ ಖಾತೆಯಿಂದ ಹಣ ಕದಿಯಲು ಹೊಸ ಐಡಿಯಾ ಮಾಡಿಕೊಂಡಿರುವ ಕಿರಾತಕರು, ದೈತ್ಯ ಮೆಸ್ಸೇಜ್ ಆಪ್ ವಾಟ್ಸಪ್ ಅನ್ನೇ ಉಪಯೋಗಿಸಿಕೊಂಡಿದ್ದಾರೆ. ಇದೀಗ ಕೌನ್ ಬನೇಗಾ ಕರೋಡ್ಪತಿʼ (ಕೆಬಿಸಿ) ಎಂಬ ಶೋ ಹೆಸರಿನ ಮೂಲಕ ವಂಚಕರ ತಂಡ ಜನರಿಗೆ ಮೋಸ ಮಾಡುತ್ತಿದೆ.
ಈ ಶೋನಲ್ಲಿ ಸ್ಪರ್ಧೆಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರೆ ನಗದು ಬಹುಮಾನ ನೀಡಲಾಗುತ್ತದೆ. ಶೋ ತನ್ನ ವೀಕ್ಷಕರಿಗೆ ಸಹ ಆಟವಾಡಲು ಅವಕಾಶ ನೀಡುತ್ತದೆ. ಅದರಂತೆ ಇದೀಗ ಕೆಬಿಸಿ ಆನ್ಲೈನ್ ಲಾಟರಿ ಇಲಾಖೆಯಿಂದ ಬಂದವರು ಎಂದು ಹೇಳಿ ಲಾಟರಿ ಭರವಸೆ ನೀಡುವ ವಾಟ್ಸಾಪ್ ಸಂದೇಶವನ್ನು ಕಳುಹಿಸುತ್ತಾರೆ. ಇಂತಹ ಮೋಸದ ಬಲೆಗೆ ಅದೆಷ್ಟೋ ಜನ ಬಲಿಯಾಗಿದ್ದಾರೆ.
ವಂಚಕರು ಕೆಬಿಸಿ ಲಾಟರಿ, ಕೌನ್ ಬನೇಗಾ ಜಂಟಿಯಾಗಿ ಆಯೋಜಿಸಿದ್ದ ಲಾಟರಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆ ಗೆದ್ದಿದೆ ಎಂದು ಹೇಳಿಕೊಂಡು ಅಪರಿಚಿತ ಸಂಖ್ಯೆಗಳಿಂದ ವಾಟ್ಸಪ್ ಸಂದೇಶಗಳನ್ನು ಕಳುಹಿಸುತ್ತಾರೆ. ವಾಟ್ಸಾಪ್ ಸಂದೇಶದಲ್ಲಿ ನಂಬಿಕೆ ಹುಟ್ಟಿಸಲು ರಿಲಯನ್ಸ್ ಜಿಯೋ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲೋಗೋಗಳನ್ನು ಹಾಕುತ್ತಾರೆ ಮತ್ತು 25 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಭರವಸೆ ನೀಡುತ್ತಾರೆ. ನಂತರ ಆ ಲಾಟರಿಯನ್ನು ಕ್ಲೈಮ್ ಮಾಡಲು ಅದೇ ವಾಟ್ಸಪ್ ಸಂದೇಶದಲ್ಲಿ ಸಂಖ್ಯೆಯನ್ನು ನೀಡುತ್ತಾರೆ. ಸಂತ್ರಸ್ತರು ಆ ಸಂಖ್ಯೆಗೆ ಕರೆ ಮಾಡಿದರೆ, ಲಾಟರಿಯನ್ನು ಕ್ಲೈಮ್ ಮಾಡಲು ಮೊದಲು ರೀಫಂಡ್, ಸಂಸ್ಕರಣಾ ಶುಲ್ಕ/ಜಿಎಸ್ಟಿ/ದಾಖಲಾತಿ ಶುಲ್ಕವನ್ನು ಪಾವತಿಸುವಂತೆ ವಂಚಕರು ಕೇಳುತ್ತಾರೆ.
ಸಂತ್ರಸ್ತರು ಮೊದಲ ಹಣ ಕೊಟ್ಟರೆ ಬಳಿಕ, ಅವರು ಒಂದಲ್ಲ ಒಂದು ನೆಪದಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಮುಂದೆ ಲಾಟರಿ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಮತ್ತಷ್ಟು ಹಣ ವಸೂಲಿ ಮಾಡುತ್ತಾರೆ. ಭಾರತ ಮತ್ತು ಪಾಕಿಸ್ತಾನದ ಕೆಲ ವಂಚಕರು ಕಾರ್ಯಕ್ರಮದ ವಿಶ್ವಾಸಾರ್ಹತೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಈ ರೀತಿ ಅನೇಕರನ್ನು ವಂಚಿಸಿದ್ದಾರೆ. ವಂಚಕರು ತಮ್ಮ ಗುರಿಗಳನ್ನು ಸೆಳೆಯಲು 25 ಲಕ್ಷ ರೂಪಾಯಿಗಳ ಲಾಟರಿ ಭರವಸೆ ನೀಡುವ ವಾಟ್ಸಾಪ್ ಸಂದೇಶವನ್ನು ಕಳುಹಿಸುತ್ತಾರೆ. ಸ್ಕ್ಯಾಮರ್ಗಳು ನಿರ್ದಿಷ್ಟ ಸಂಖ್ಯೆಗೆ ಕರೆ ಮಾಡಿ ಪ್ರಚೋದಿಸುತ್ತಾರೆ. ನಂತರ ಮುಂಗಡ ಹಣವನ್ನು ಕೇಳಿ ವಂಚಿಸುತ್ತಾರೆ.
ಇಂತಹ ಮೋಸದ ಜಾಲೆಗೆ ಇತ್ತೀಚೆಗಷ್ಟೇ ಹೈದರಾಬಾದಿನ ವ್ಯಕ್ತಿಯೊಬ್ಬರು ಬಲಿಯಾಗಿ ಸುಮಾರು 3 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಕಲಿ ಕೆಬಿಸಿ ಲಾಟರಿ ಯೋಜನೆಯನ್ನು ಬಳಸಿಕೊಂಡು 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ. ಈ ಇಬ್ಬರನ್ನು ದೆಹಲಿ ಪೊಲೀಸರು ಕೆಲ ತಿಂಗಳ ಹಿಂದೆ ಬಂಧಿಸಿದ್ದಾರೆ.