ಬಿಡದೇ ಬಿಕ್ಕಳಿಕೆ ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ಆರ್ಯುವೇದ ಪರಿಹಾರ ಇಲ್ಲಿದೆ!!!
ಬಿಕ್ಕಳಿಕೆ ಬಂದರೆ ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತದೆ. ಆದರೆ ಕೆಲವೊಮ್ಮೆ ನಿರಂತರವಾಗಿ ಬರುತ್ತಿರುತ್ತದೆ. ಕಡಿಮೆ ಮಾತ್ರ ಆಗುವುದಿಲ್ಲ. ಕೆಲವರಿಗೆ ಹೆಚ್ಚು ಖಾರ ತಿಂದಾಗ, ಇನ್ನು ಕೆಲವರಿಗೆ ನೀರು ಗುಟುಕಿಸಿದ ಸಂದರ್ಭದಲ್ಲಿ, ಮತ್ತು ಕೆಲವರಿಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬರಬಹುದು. ಆಗ ನೀರು ಕುಡಿದು ಸುಮ್ಮನಾಗುವ ಪರಿಪಾಠ ಹೆಚ್ಚಿನವರಿಗಿದೆ.
ದೇಹದ ಹೊಟ್ಟೆಯ ಮೇಲ್ಭಾಗದಲ್ಲಿ ಹಾಗೂ ಎದೆಯ ಕೆಳಭಾಗದಲ್ಲಿ ಡಯಾಫ್ರಂ ಎನ್ನುವ ಒಂದು ಪದರವಿರುತ್ತದೆ. ಇದು ಯಾವುದೇ ಕ್ಷಣದಲ್ಲಿ ಅಚಾನಕ್ಕಾಗಿ ಸೆಳೆತಕ್ಕೆ ಒಳಗಾದರೆ ಅದರ ಪ್ರಭಾವದಿಂದ ಬಿಕ್ಕಳಿಕೆ ಬರುತ್ತದೆ. ಹೀಗೆ ಬರುವ ಬಿಕ್ಕಳಿಕೆಯನ್ನು ನೈಸರ್ಗಿಕವಾಗಿ ಆಯುರ್ವೇದ ಪ್ರಕ್ರಿಯೆಯ ಮೂಲಕ ಮನೆಯಲ್ಲೇ ಸುಲಭವಾದ ಮನೆಮದ್ದುಗಳನ್ನು ಮಾಡಿಕೊಂಡು ಬಿಕ್ಕಳಿಕೆ ಸಮಸ್ಯೆಯಿಂದ ಹೊರಬರಬಹುದು.
ಬಿಕ್ಕಳಿಕೆ ಬಂದ ತಕ್ಷಣ ಒಂದು ಲೋಟ ನೀರು ಕುಡಿಯುವುದು ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀರಿನಿಂದ ಬಾಯಿ ಮುಕ್ಕಳಿಸಬಹುದು ಅಥವಾ ನೀರನ್ನು ತಲೆ ಬಾಗಿಸಿ ನುಂಗಬಹುದು. ಹೀಗೆ ಮಾಡುವುದರಿಂದ ಬಿಕ್ಕಳಿಕೆ ಹೊರಟು ಹೋಗುತ್ತದೆ. ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ, ಅದಕ್ಕೆ ಒಂದು ಟೀ ಚಮಚ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಬೇಕು. ಇದನ್ನು 15 ನಿಮಿಷ ಆರಲು ಬಿಟ್ಟು ಆನಂತರ ಸೋಸಿಕೊಂಡು ಉಗುರು ಬೆಚ್ಚಗಿರುವಾಗ ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ನಿಂಬೆ ಹಣ್ಣಿನ ಹೋಳನ್ನು ಹಿಂಡಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಬಹುದು. ಇಲ್ಲವೆಂದರೆ ನಿಂಬೆಹಣ್ಣಿನ ಸಣ್ಣ ಪ್ರಮಾಣವನ್ನು ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ಪುಡಿ ಉಪ್ಪು ಉದುರಿಸಿ ಅದನ್ನು ಬಾಯಿಯಲ್ಲಿ ಇಟ್ಟುಕೊಂಡು ಉಪ್ಪು ಹುಳಿ ರಸ ಹೀರಬಹುದು. ಹೀಗೆ ಮಾಡುವುದರಿಂದ ಬಿಕ್ಕಳಿಕೆ ನಿಂತು ಹೋಗಲಿದೆ. ಟೀ ಚಮಚ ಸಕ್ಕರೆಯನ್ನು ಬಾಯಿಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ನಿಧಾನವಾಗಿ ಜಗಿದು ತಿನ್ನಬೇಕು. ಅಂದರೆ ಸಕ್ಕರೆ ರಸ ಸ್ವಲ್ಪ ಸ್ವಲ್ಪ ನಿಮ್ಮ ದೇಹಕ್ಕೆ ಹೋದಂತೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.(ಸಕ್ಕರೆ ಖಾಯಿಲೆ ಇಲ್ಲದವರು ಮಾತ್ರ ಬಳಸಬೇಕು).
ಬಿಕ್ಕಳಿಕೆ ಬಂದಂತಹ ಸಂದರ್ಭದಲ್ಲಿ ನಾಲಿಗೆಯ ಮೇಲೆ ಒಂದು ತೊಟ್ಟು ವಿನೆಗರ್ ಹಾಕಿಕೊಂಡು ಚಪ್ಪರಿಸಿ ಸೇವನೆ ಮಾಡುವುದರಿಂದ ಬಿಕ್ಕಳಿಕೆಯಿಂದ ಪರಿಹಾರ ಕಾಣಬಹುದು. ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮ ಮಾಡುವ ಪ್ರಕ್ರಿಯೆಯಿಂದ ಬಿಕ್ಕಳಿಕೆ ನಿಲ್ಲುತ್ತದೆ.
ಐದಾರು ಕಾಳು ಮೆಣಸು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಕಾಳುಮೆಣಸಿನ ಪೌಡರ್ ತಯಾರಿಸಿಕೊಂಡು ಅದನ್ನು ಮೂಗಿನಿಂದ ನಶೆಯ ರೀತಿ ತೆಗೆದುಕೊಳ್ಳಬೇಕು. ಇದರಿಂದ ಖಂಡಿತ ಸೀನು ಬಂದು, ಬಳಿಕ ಬಿಕ್ಕಳಿಕೆ ನಿಲ್ಲುತ್ತದೆ. ಮೊಸರು ಮತ್ತು ಸಕ್ಕರೆ ಒಂದು ಅತ್ಯುತ್ತಮ ಪರಿಹಾರವಾಗಿದ್ದು, ಬಿಕ್ಕಳಿಕೆಯನ್ನು ನಿಲ್ಲಿಸುತ್ತದೆ. ಒಂದು ಸಣ್ಣ ಪೀಸ್ ಶುಂಠಿಯನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಜಜ್ಜಿ ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಕುಡಿಯಬೇಕು. ಹೀಗೆ ಮಾಡುವುದರಿಂದ ಬಿಕ್ಕಳಿಕೆ ಮಾಯವಾಗುತ್ತದೆ.
ಸಾಮಾನ್ಯವಾಗಿ ಬರುವಂತಹ ಬಿಕ್ಕಳಿಕೆಗಳು ತಾವಾಗಿಯೇ ಕಡಿಮೆ ಸಮಯ ತಾತ್ಕಾಲಿಕವಾಗಿ ಇದ್ದು, ಆನಂತರ ಹೊರಟುಹೋಗುತ್ತದೆ. ಆದರೆ ಬಿಕ್ಕಳಿಕೆ 3 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಬರುತ್ತಿದ್ದು , ಆಹಾರ ಸೇವಿಸಲು ಆಗದಿದ್ದರೆ, ವೈದ್ಯರನ್ನು ಭೇಟಿಯಾಗುವುದು ಅವಶ್ಯವಾಗಿದೆ.