ಕಾಂಗ್ರೆಸ್ ನ ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ | ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್ ಗೆ ತೀವ್ರ ಮುಖ ಭಂಗ !

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಯಾವತ್ತೂ ಟೀಕಿಸುವ ಸಾವರ್ಕರ್ ಅವರು ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ ಜೋಡು ಯಾತ್ರೆಯ ಬ್ಯಾನರ್ ನಲ್ಲಿ ಸಾವರ್ಕರ್ ಅವರು ಪ್ರತ್ಯಕ್ಷರಾಗಿದ್ದಾರೆ. ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸದ ಕಾಂಗ್ರೆಸ್ ಇಂದು ಒಂದು ದೊಡ್ಡ ಪ್ರಮಾದ ಎಸಗಿದೆ. ಕಾಂಗ್ರೆಸ್ ಜೋಡೋ ಯಾತ್ರೆಯ ಹಿನ್ನೆಲೆ ಮಾಡಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಚಿತ್ರವೂ ಕಂಡುಬಂದಿದೆ. ಈ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.

 

ಕಾಂಗ್ರೆಸ್‌ ತನ್ನ ಮಹಾತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಸಂದರ್ಭ ಕಾಂಗ್ರೆಸ್ ನ ಈ ಎಡವಟ್ಟು ಕಂಡು ಬಂದಿದೆ. ಯಾತ್ರೆ ಕೇರಳದ ಎರ್ನಾಕುಲಂ ಜಿಲ್ಲೆ ತಲುಪಿದಾಗ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ ಗಮನಕ್ಕೆ ಬಂದಿದೆ.  ಕಾಂಗ್ರೆಸ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಅವರಿಗೆ ಕ್ಷಮೆ ಯಾಚಿಸಿದವರು ಎಂದು ಇವರಿಗೆ ವಾದಿಸುತ್ತಾ ಬಂದಿರುವ ಕಾಂಗ್ರೆಸ್ಸಿಗೆ ತೀವ್ರ ಅವಮಾನವಾದ ಸನ್ನಿವೇಶ ಇವತ್ತು ಸೃಷ್ಟಿಯಾಗಿದೆ.

ತಕ್ಷಣವೇ ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್, ಇದು ಪ್ರಿಂಟಿಂಗ್ ಮಿಸ್ಟೇಕ್‌ನಿಂದ ಆಗಿದೆ ಎಂದು ತಿಪ್ಪೆ ಸಾರಿಸಲು ಹೊರಟಿದೆ. ನಾವು ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಿರುವ ಪೋಸ್ಟರ್ ತಯಾರಿಸಲು ಹೇಳಿದಾಗ ಅವರು ಕ್ರಾಸ್ ಚೆಕ್ ಮಾಡದೇ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಎಲ್ಲಾ ಫೋಟೋಗಳನ್ನೂ ಹಾಕಿ ಪೋಸ್ಟರ್ ಮಾಡಿದ್ದಾರೆ. ಬಳಿಕ ಸಾವರ್ಕರ್ ಫೋಟೋ ಮೇಲೆ ಗಾಂಧೀಜಿಯವರ ಚಿತ್ರವನ್ನು ಹಾಕುವ ಮೂಲಕ ತಪ್ಪನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದೆ.

ಕೇರಳದ ಪಕ್ಷೇತರ ಶಾಸಕ ಪಿ.ವಿ ಅನ್ವರ್ ಅವರು ಈ ಪೋಸ್ಟರ್ ಅನ್ನು ಗಮನಿಸಿ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾದ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಫೋಟೋವನ್ನು ಹಾಕಲಾಗಿದೆ. ಈ ವಿಚಾರ ಕಾರ್ಯಕರ್ತರ ಗಮನಕ್ಕೆ ಬರುತ್ತಿದ್ದಂತೆ ಸಾವರ್ಕರ್ ಅವರ ಫೋಟೋ ಮೇಲೆ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಅಂಟಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

Leave A Reply

Your email address will not be published.