ಕರಾವಳಿಗರಿಗೆ ದಸರಾ ಟೂರ್ ಪ್ಯಾಕೇಜ್ | ದಸರಾ ಹಬ್ಬದ ಭರ್ಜರಿ ಗಿಫ್ಟ್
ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗಲಿದ್ದು, ಈಗಾಗಲೇ ಸಡಗರ, ಸಂಭ್ರಮದಿಂದ ಹಬ್ಬವನ್ನು ಆಚರಿಸಲು ಸಿದ್ಧತೆ ಭರದಿಂದ ಸಾಗುತ್ತಿದೆ. ಜಗತ್ ಪ್ರಸಿದ್ಧ ಮೈಸೂರು ದಸರಾ ನೋಡಲು ದೇಶ – ವಿದೇಶಗಳಿಂದಲೂ ಸಾಗರೋಪಾದಿಯಲ್ಲಿ ಜನ ಬರುತ್ತಾರೆ. ಮೈಸೂರಿನಲ್ಲಿ ಈ ಸಂದರ್ಭದಲ್ಲಿ ಜನರ ಅನುಕೂಲಕ್ಕೆ ವಿಶೇಷ ಬಸ್ ವ್ಯವಸ್ಥೆ ರೂಪಿಸುವುದು ತಿಳಿದಿರುವ ವಿಚಾರ.
ಇದೇ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಟೂರ್ ಪ್ಯಾಕೇಜ್ ಘೋಷಿಸಿದ್ದು, ಒಂದು ದಿನದ ಈ ಟೂರ್ ಪ್ಯಾಕೇಜ್‌ನಲ್ಲಿ ಜನರ ಅನುಕೂಲಕ್ಕೆ ತಕ್ಕಂತೆ ಮಂಗಳೂರಿನ ಸುತ್ತಮುತ್ತ ಇರುವ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳಲು ಬಯಸುವ ಕರಾವಳಿ ಜನರಿಗೆ ಸಿಹಿ ಸುದ್ದಿ ನೀಡಿ, ಅನುಕೂಲಕರ ವಾತಾವರಣ ಸೃಷ್ಟಿಸಿರುವ ಸಾರಿಗೆ ವ್ಯವಸ್ಥೆ ಒಂದು ದಿನ ಒಟ್ಟು ಒಂಭತ್ತು ದೇವಸ್ಥಾನಗಳಿಗೆ ಭೇಟಿ ನೀಡುವ ಯೋಜನೆ ರೂಪಿಸಿದೆ.
ಮಂಗಳೂರು ದಸರಾ ಸಿದ್ಧತೆ
ದಸರಾ ಹಬ್ಬದ ಸಿದ್ಧತೆ ಮಂಗಳೂರಿನಲ್ಲೂ ಕೂಡ ಗರಿಗೆದರಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿಯೂ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ವೈಭವದ ದಸರಾ ನಡೆಸಲಾಗುತ್ತಿದ್ದು ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ಸುಂದರ ಕ್ಷಣಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗುತ್ತಾರೆ. ಹಾಗಾಗಿ ಮಂಗಳೂರು ದಸರಾ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ಈ ವಿಶೇಷ ಸಂದರ್ಭದಲ್ಲಿ, ದೇಗುಲಗಳಲ್ಲಿ ವಿಶೇಷ ಪೂಜೆ- ಪುನಸ್ಕಾರಗಳು ನಡೆದು, ಹಬ್ಬದ ಹತ್ತು ದಿನಗಳ ಕಾಲ ವಿದ್ಯುದ್ದೀಪಾಲಂಕಾರದಿಂದ ಅಲಂಕೃತಗೊಂಡು ನವವಧುವಿನಂತೆ ಮಂಗಳೂರು ಕಂಗೊಳಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಈ ಬಾರಿ ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮ ಕೂಡಾ ಹಬ್ಬದ ಪ್ರಯುಕ್ತ ಜನರಿಗೆ ಭರ್ಜರಿ ಆಫರ್ ನೀಡಿದ್ದು, ಮೊದಲ ಬಾರಿಗೆ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗ ದಸರಾ ಟೂರ್ ಪ್ಯಾಕೇಜ್ ಘೋಷಿಸುವ ಮೂಲಕ ಕರಾವಳಿಗರು ಪ್ರಮುಖ ದೇಗುಲಗಳ ದರ್ಶನ ಪಡೆಯುವ ಅವಕಾಶವನ್ನು ಕಲ್ಪಿಸಿದೆ.
ದಸರಾ ದೇಗುಲ ದರ್ಶನ
ಒಂದು ಬಸ್‌ನಲ್ಲಿ 30 ಮಂದಿಗೆ ಅವಕಾಶವಿದ್ದು, ಒಂದು ದಿನದ ಧಾರ್ಮಿಕ ಪ್ರವಾಸಕ್ಕೆ ವಯಸ್ಕರಿಗೆ 300 ರೂಪಾಯಿ ಹಾಗೂ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ 250 ರೂಪಾಯಿ ನಿಗದಿಪಡಿಸಲಾಗಿದೆ. ಊಟ ಮತ್ತು ಉಪಹಾರದ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.
ಈ ದಸರಾ ದರ್ಶನ ಪ್ಯಾಕೇಜ್ ಮೂಲಕ ಒಂಭತ್ತು ಪ್ರಮುಖ ದೇವಸ್ಥಾನಗಳ ದರ್ಶನ ಮಾಡಬಹುದಾಗಿದೆ.
ದಸರಾ ದರ್ಶನ ಟೂರ್ ಪ್ಯಾಕೇಜ್‌ನಲ್ಲಿ ಒಂದು ದಿನದಲ್ಲಿ ಪೂರ್ತಿ ವಿವಿಧ ದೇವಸ್ಥಾನಗಳ ದರ್ಶನ ಮಾಡಬಹುದಾಗಿದೆ. ಮೊದಲು ಮಂಗಳೂರಿನ ಮಂಗಳಾದೇವಿ ದೇವಸ್ಥಾನ (ಬೆಳಿಗ್ಗೆ 8 ರಿಂದ 9 ಗಂಟೆ), ಮಂಗಳಾದೇವಿ ದೇಗುಲದಿಂದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ (ಬೆಳಗ್ಗೆ 9.45 ರಿಂದ 10.15), ಪೊಳಲಿಯಿಂದ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ( ಬೆಳಿಗ್ಗೆ 10.45 ರಿಂದ 11.15), ಸುಂಕದಕಟ್ಟೆ ದೇಗುಲದಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನ 11.35 ರಿಂದ – 12.15 ಗಂಟೆ), ಕಟೀಲು ದೇವಸ್ಥಾನದಿಂದ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನ 12.45 -2 ಗಂಟೆ, ಊಟ), ಬಪ್ಪನಾಡು ದೇವಸ್ಥಾನದಿಂದ ಸಸಿಹಿತ್ಲು ಶ್ರೀಭಗವತಿ ದೇವಸ್ಥಾನ (ಮಧ್ಯಾಹ್ನ 2.30ರಿಂದ 4 ಗಂಟೆ), ಬಳಿಕ ಚಿತ್ರಾಪುರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ (ಸಂಜೆ 4.15ರಿಂದ 4.45), ಚಿತ್ರಾಪುರದಿಂದ ಉರ್ವ ಶ್ರೀಮಾರಿಯಮ್ಮ ದೇವಸ್ಥಾನ (ಸಂಜೆ 5.15ರಿಂದ 6.15 ಉಪಹಾರ), ಉರ್ವದಿಂದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಹಾಗೂ ನವದುರ್ಗೆಯರ ದರ್ಶನ (ಸಂಜೆ 6.30 ರಿಂದ 7.30), ಇಲ್ಲಿಂದ ಮರಳಿ ಮಂಗಳೂರು ಬಸ್ ನಿಲ್ದಾಣಕ್ಕೆ ಸುಮಾರು 8.30ಕ್ಕೆ ಈ ಟೂರ್ ಪ್ಯಾಕೇಜಿನ ಬಸ್ ತಲುಪಲಿದೆ.
ಈ ಟೂರ್ ಪ್ಯಾಕೇಜ್ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರ ತನಕ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಎಂಟು ಗಂಟೆಗೆ ವಿಶೇಷ ಟೂರ್ ಪ್ಯಾಕೇಜಿನ ಬಸ್ ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಟು ರಾತ್ರಿ ಸುಮಾರು 8.30ಕ್ಕೆ ಮರಳುತ್ತದೆ. ಚಾಲಕ ಸೇರಿ ನಿರ್ವಾಹಕರು ಬಸ್‌ನಲ್ಲಿ ಇದ್ದು ಪ್ರಯಾಣಿಕರಿಗೆ ನೆರವಾಗಲಿದ್ದಾರೆ.
ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಬಸ್ ಹೊರಡುವ ಮುನ್ನ ಸ್ಥಳದಲ್ಲಿಯೇ ಟಿಕೆಟ್ ಕೂಡಾ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಸಂಖ್ಯೆಗೆ 9663211553 ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ, ಅಥವಾ ಬೇಡಿಕೆ ಹೆಚ್ಚಾದರೆ ಹೆಚ್ಚು ಬಸ್ಸಿನ ವ್ಯವಸ್ಥೆ ಮಾಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯ ನರ್ಮ್ ಬಸ್‌ಗಳನ್ನು ಈ ಪ್ರವಾಸದ ಪ್ಯಾಕೇಜಿಗೆ ಬಳಸಿಕೊಳ್ಳಲಾಗಿದೆ.
ಮೈಸೂರು ದಸರಾ ಮಾದರಿಯ ಪ್ಯಾಕೇಜ್‌ನಂತೆಯೇ ಇದ್ದು, ಮೊದಲ ಬಾರಿಗೆ ಮಂಗಳೂರು ಕೆಎಸ್‌ಆರ್‌ಟಿಸಿ ಕೂಡಾ ಈ ನವರಾತ್ರಿ ಪ್ಯಾಕೇಜ್ ಟೂರ್ ಪರಿಚಯಿಸಿದೆ. ಇದರಿಂದ ಮಂಗಳೂರು ದಸರಾ ನೋಡಲು ಬಂದವರಿಗೂ ಕೂಡ ಅನುಕೂಲವಾಗಲಿದೆ.
ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೇ ಟಿಕೆಟ್ ಖರೀದಿಸಬಹುದಾಗಿದೆ. ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ https://ksrtc.in ನಲ್ಲಿ `ಮಂಗಳೂರಿನಿಂದ ಕಟೀಲು ನಮೂದಿಸಿ ಪ್ರಯಾಣಿಕರು ಪ್ರಯಾಣ ಮಾಡಲು ಬಯಸುವ, ಪ್ರಯಾಣದ ದಿನಾಂಕವನ್ನು ನಮೂದಿಸಬೇಕು. (MANGALORE- KATIL) ಹೀಗೆ ನಮೂದಿಸಿ ಪ್ರಯಾಣದ ದಿನಾಂಕ ಹಾಕಿದರೆ ಟಿಕೆಟ್ ಬುಕ್ಕಿಂಗ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಯಾಣಿಕರಿಗೆ 0800MNGKTLPKG( SPL )ಎಂದು ಕಾಣಿಸುತ್ತದೆ. ಇಲ್ಲಿನ ಲಿಂಕ್ ಕ್ಲಿಕ್ ಮಾಡಿ ಪ್ರಯಾಣಿಕರು ಮುಂಗಡ ಟಿಕೆಟ್ ಪಡೆದುಕೊಳ್ಳಬಹುದು.
ಒಂದೇ ದಿನದಲ್ಲಿ ಟೆಂಪಲ್ ರನ್ ಮಾಡಲು ಬಯಸುವವರಿಗೆ ಇದು ಸುವರ್ಣಾವಕಾಶವಾಗಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು.