Brown Bread Benefits : ಬಿಪಿ ಸಮಸ್ಯೆಗೆ ಬ್ರೌನ್ ಬ್ರೆಡ್ ಉತ್ತಮ | ಹೇಗೆ ತಿಂದರೆ ಬೆಸ್ಟ್?
ಬ್ರೆಡ್ ಎಂದಾಗ ತಕ್ಷಣ ನೆನಪಾಗುವುದು ಆರೋಗ್ಯ ತಪ್ಪಿದಾಗ ಬಳಸುವ ಬಿಳಿಯ ಬ್ರೆಡ್. ಆದರೆ ಹೆಚ್ಚಿನವರಿಗೆ ಬ್ರೌನ್ ಬ್ರೆಡ್ ಬಗ್ಗೆ ತಿಳಿದಿಲ್ಲ. ಕಂದು ಬ್ರೆಡ್ ಅನ್ನು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಅಲ್ಲದೆ ಹೊರ ಹೊದಿಕೆಯು ಕೂಡ ಹಾಗೇ ಇರುತ್ತದೆ. ಬಿಳಿ ಬ್ರೆಡ್‌ಗೆ ಹೋಲಿಸಿದರೆ ಕಂದು ಬ್ರೆಡ್ ಹೆಚ್ಚು ಪೌಷ್ಟಿಕ ಮತ್ತು ಕರಗದ ನಾರಿನಂಶದಿಂದ ಸಮೃದ್ಧವಾಗಿದೆ. ಕಂದು ಬ್ರೆಡ್ ಹೆಚ್ಚು ವಿಟಮಿನ್ ಬಿ -6 ಮತ್ತು ಇ, ಮೆಗ್ನೀಸಿಯಮ್, ಫೋಲಿಕ್ ಆ್ಯಸಿಡ್, ಸತು ತಾಮ್ರ ಮತ್ತು ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ. ಬಿಳಿ ಬ್ರೆಡ್ ತಯಾರಿಸಲು, ಮೈದಾ ಹಿಟ್ಟನ್ನು ಬಳಸಲಾಗುತ್ತದೆ
ಬ್ರೌನ್ ಬ್ರೆಡ್ ಅನ್ನು ಗೋಧಿ ಹಿಟ್ಟು, ನೀರು, ಉಪ್ಪು, ಸಕ್ಕರೆ ಮತ್ತು ಯೀಸ್ಟ್ ಬಳಸಿ ತಯಾರಿಸಲಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಇದು ಆರೋಗ್ಯಕ್ಕೆ ಒಳ್ಳೆಯದಾದರೂ, ಇದನ್ನು ಸೇವಿಸುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳಿವೆ.
ಅಧ್ಯಯನಗಳ ಪ್ರಕಾರ, ಬ್ರೌನ್ ಬ್ರೆಡ್ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಅಲ್ಲದೆ ಗೋಧಿಯ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಪೂರ್ಣ ಗೋಧಿಯಿಂದ ಮಾಡಿದ ಬ್ರೌನ್ ಬ್ರೆಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನನಿತ್ಯ ಬ್ರೌನ್ ಬ್ರೆಡ್ ತಿನ್ನುವುದು ಸಂತೋಷದ ಹಾರ್ಮೋನ್ ಸಿರೊಟೋನಿನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ಮೆದುಳಿನ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.
ಗೋಧಿಯಲ್ಲಿರುವ ಫೈಬರ್ ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಜೀರ್ಣಕ್ರಿಯೆ ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಬಿಳಿ ಬ್ರೆಡ್ ಬದಲಿಗೆ ಬ್ರೌನ್ ಬ್ರೆಡ್ ಸೇವನೆ ಮಾಡುವುದು ಒಳ್ಳೆಯದು.
ಬ್ರೌನ್ ಬ್ರೆಡ್ ಆರೋಗ್ಯಕರ ಬ್ರೆಡ್ ವಿಧಗಳಲ್ಲಿ ಒಂದಾಗಿದೆ. ಆದರೆ ಇದು ಕಂದು ಬಣ್ಣದಲ್ಲಿರಲು ಕಾರಣವೇನು ಎಂಬ ಪ್ರಶ್ನೆ ಹಲವರಿಗೆ ಬಂದಿರಬಹುದು. ಬ್ರೌನ್ ಬ್ರೆಡ್ ಅನ್ನು ಗೋಧಿ ಹಾಗೂ ಸೋಯಾದಿಂದ ತಯಾರಿಸಲಾಗುವುದು, ಆದ್ದರಿಂದಲೇ ಇದು ನೋಡಲು ಕಂದು ಬಣ್ಣದಲ್ಲಿರುತ್ತದೆ. ಇದರಲ್ಲಿ ಕೊಬ್ಬಿನಂಶ ಕಡಿಮೆಯಿದ್ದು, ಪ್ರೊಟೀನ್ ಅಧಿಕವಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಕೆಲವೊಮ್ಮೆ ಕಂದು ಬ್ರೆಡ್‌ನ ಬಣ್ಣವನ್ನು ಹೆಚ್ಚಿಸಲು ಕ್ಯಾರಮೆಲ್ ಬಣ್ಣವನ್ನು ಬೆರೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಖರೀದಿಸುವ ಮೊದಲು ಲೇಬಲ್ ಅನ್ನು ಪರಿಶೀಲಿಸಿ ಕೊಂಡುಕೊಳ್ಳುವುದು ಒಳ್ಳೆಯದು.
ಬ್ರೌನ್ ಬ್ರೆಡ್ ಹೆಚ್ಚಿನ ಫೈಬರ್ ಹೊಂದಿದ್ದು , ಧಾನ್ಯಗಳನ್ನು ಕೂಡ ಒಳಗೊಂಡಿರುವುದರಿಂದ ಉರಿಯೂತವನ್ನು ಕಡಿಮೆ ಮಾಡಲು ಸಹಕರಿಸಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಅಂಗಡಿಯಿಂದ ಖರೀದಿಸಿದ ಬ್ರೌನ್ ಬ್ರೆಡ್ನಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇದನ್ನು ಖಾರದ ತರಕಾರಿಗಳು, ಹಂದಿಮಾಂಸ, ಬೆಣ್ಣೆ ಇತ್ಯಾದಿಗಳೊಂದಿಗೆ ತಿಂದರೆ, ಅದು ದೇಹದಲ್ಲಿ ಉಪ್ಪಿನ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ಪ್ರಚೋದಿಸುತ್ತದೆ. ಆದ್ದರಿಂದ ಅಂಗಡಿಯಲ್ಲಿ ಬ್ರೌನ್ ಬ್ರೆಡ್‌ನ ಸೋಡಿಯಂ ಅಂಶವನ್ನು ಪರಿಶೀಲಿಸಬೇಕು. ಮೈದಾದಿಂದ ಮಾಡಿದ ಬಿಳಿ ಬ್ರೆಡ್ ದೇಹಕ್ಕೆ ಹಾನಿಕಾರಕವಾಗಿದೆ. ಆರೋಗ್ಯಕರ ಬ್ರೌನ್ ಬ್ರೆಡ್ ಅನ್ನು ಬಳಸುವ ಮೊದಲು ಪರೀಕ್ಷಿಸಿ ಕೊಳ್ಳುವುದು ಒಳಿತು.