ಚಿರತೆಯ ಧ್ವನಿಯನ್ನು ಬೆಕ್ಕಿನ ಧ್ವನಿಗೆ ಹೋಲಿಸಿ ಅಣಕಿಸಿದ ಅಖಿಲೇಶ್ | ಪ್ರಧಾನಿ ಹುಟ್ಟುಹಬ್ಬದಂದು ಕೊಂಕು ಮಾತುಗಳ ಲೇವಡಿ
ಪ್ರಧಾನಿ ಜನ್ಮದಿನದಂದು ತಂದ ಚಿರತೆ ಈಗ ಭಾರೀ ಸೌಂಡು ಮಾಡುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೇ, ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. ಇವುಗಳನ್ನು ಪ್ರಧಾನಿಯವರ ಉಪಸ್ಥಿತಿಯಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚಿರತೆಗಳನ್ನು ಬಿಡಲಾಗಿದೆ. ಆದರೆ ಪ್ರತಿಪಕ್ಷಗಳಿಗೆ ಈ ಚಿರತೆ ವಿಚಾರ ಈಗ ಟೀಕೆ ಟಿಪ್ಪಣಿಗೆ ಕಾರಣವಾಗಿದೆ.
ಪ್ರಧಾನಿ ಹುಟ್ಟು ಹಬ್ಬದಂದು, ಹಲವು ನಾಯಕರು ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರೆ, ಅಖಿಲೇಶ್ ಅವರು ಚಿರತೆಗಳ ಕುರಿತು ಟೀಕೆ ಮಾಡುವುದರಲ್ಲೇ ಮಗ್ನರಾಗಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಚಿರತೆಗಳ ವೀಡಿಯೋ ಹಂಚಿಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ. ಚಿರತೆಯನ್ನು ಬೋನಿನಲ್ಲಿ ಬಂಧಿಸಿ ಅದರ ಧ್ವನಿ ಕೇಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಶಬ್ದವು ಬೆಕ್ಕಿನ ಧ್ವನಿಯನ್ನು ಹೋಲುತ್ತದೆ ಎನ್ನುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಎಲ್ಲರೂ ಘರ್ಜನೆಗಾಗಿ ಕಾಯುತ್ತಿದ್ದರು.. ಆದರೆ ಅದು ಬೆಕ್ಕಿನ ಕುಟುಂಬಕ್ಕೆ ಸೇರಿದ್ದಾಗಿತ್ತು’ ಎಂದು ಲೇವಡಿ ಮಾಡಿದ್ದಾರೆ.
ಇದಕ್ಕೂ ಮುನ್ನ ಅಖಿಲೇಶ್ ಯಾದವ್ ಅವರು ಕಾರ್ಟೂನ್ ಮೂಲಕ ಲಂಪಿ ವೈರಸ್ನಿಂದ ತೊಂದರೆಗೊಳಗಾದ ಹಸುಗಳನ್ನು ಚಿರತೆಗಳೊಂದಿಗೆ ಹೋಲಿಸಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದರು.