ಒಂದೇ ಸಮಯದಲ್ಲಾದ ಎರಡು ಅಪಘಾತದಿಂದ ಬೈಕ್ ಸವಾರನ ಜೀವ ಉಳಿಸಿದ ‘ಹೆಲ್ಮೆಟ್’! ನೀವೂ ನೋಡಲೇಬೇಕು ಈ ವೀಡಿಯೋ
ಹೆಲ್ಮೆಟ್ ರಹಿತ ಪ್ರಯಾಣ ಪ್ರಾಣಕ್ಕೆ ಹಾನಿಕಾರಿ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರೋ ವಿಷಯ. ಆದ್ರೆ, ಇನ್ನೂ ಅದೆಷ್ಟೋ ಮಂದಿ ಫ್ಯಾಷನ್, ಟ್ರೆಂಡ್ ಎನ್ನುತ್ತಾ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಾರೆ. ಅದರಂತೆ ಅಪಘಾತದಲ್ಲಿ ಮೃತ ಪಡೋರ ಸಂಖ್ಯೆಯೇ ಅಧಿಕವಾಗಿದೆ. ಇದಕ್ಕೆ ಕಾರಣವೇ ಜೀವ ರಕ್ಷಕ ಹೆಲ್ಮೆಟ್ ಧರಿಸದೆ ಇರೋದು. ಇದಕ್ಕೆ ಸಾಲು ಸಾಲು ಉದಾಹರಣೆಗಳೇ ಇದ್ದು, ಇದೀಗ ಮತ್ತೊಂದು ಘಟನೆ ಮನವರಿಕೆ ಮೂಡಿಸುವಂತಿದೆ.
ಹೌದು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದರೆ ಮಾತ್ರ ಖಂಡಿತವಾಗಿಯೂ ಹೆಲ್ಮೆಟ್ ಮಹತ್ವ ಏನೆಂಬುದನ್ನು ತಿಳಿದೇ ತಿಳಿಯುತ್ತದೆ. ಯಾಕೆಂದರೆ ಈ ವೀಡಿಯೋದಲ್ಲಿ ಇರುವಂತೆ ಒಂದಲ್ಲ ಎರಡು ಅಪಘಾತದಿಂದ ಹೆಲ್ಮೆಟ್ ಬೈಕ್ ಸವಾರನ ಪ್ರಾಣ ಉಳಿಸಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹೆಲ್ಮೆಟ್ ಅಭಿಯಾನದ ಭಾಗವಾಗಿ ದೆಹಲಿ ಪೊಲೀಸರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡುವ ಮೂಲಕ ಹೆಲ್ಮೆಟ್ ಮಹತ್ವವನ್ನು ಸಾರಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಇರುವಂತೆ, ವೇಗವಾಗಿ ಬರುವ ಬೈಕ್ಗೆ ಕಾರೊಂದು ಅಡ್ಡಿಯಾದಾಗ ವಿಚಲಿತಗೊಂಡ ಬೈಕ್ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಬಳಿಕ ಬೈಕ್ ಸಮೇತ ಕೆಳಗೆ ಬೀಳುತ್ತಾನೆ. ಬಿದ್ದ ರಭಸಕ್ಕೆ ಎರಡ್ಮೂರು ಮೀಟರ್ಗಳಷ್ಟು ಬೈಕ್ ಸಮೇತ ಬೀಳುತ್ತಾನೆ. ಒಂದು ಅಪಘಾತದಿಂದ ತಪ್ಪಿಸಿಕೊಂಡ ಅನ್ನುವಷ್ಟರಲ್ಲೇ, ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಕಂಬ ಕುಸಿದು, ನೇರವಾಗಿ ಬೈಕ್ ಸವಾರನ ಮೇಲೆ ಬೀಳುತ್ತದೆ.
ಅಷ್ಟರಲ್ಲೇ ಎದ್ದು ನಿಂತಿದ್ದ ಸವಾರ ಕಂಬ ಬಿದ್ದ ರಭಸಕ್ಕೆ ಮತ್ತೆ ಕುಸಿದು ಬಿದ್ದು, ಮತ್ತೆ ಏಳುತ್ತಾನೆ. ಇದೇ ನೋಡಿ ಹೆಲ್ಮೆಟ್ ತಂದ ಅದೃಷ್ಟ. ಇದರಿಂದಾಗಿ ಒಂದೇ ಸಮಯದಲ್ಲಿ ಸಂಭವಿಸಿದ ಎರಡು ಅಪಘಾತದಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ.
ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಲೆಂದು ದೆಹಲಿ ಪೊಲೀಸರು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಹೆಲ್ಮೆಟ್ ಧರಿಸುವುದರಿಂದ ಒಂದಲ್ಲ, ಎರಡಲ್ಲ ಅನೇಕ ಬಾರಿ ಜೀವ ಉಳಿಸುತ್ತದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ನಿನ್ನೆಯಷ್ಟೇ ಶೇರ್ ಆಗಿರುವ ವಿಡಿಯೋ 1 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ. 26 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು 5 ಸಾವಿರಕ್ಕೂ ಅಧಿಕ ರೀಟ್ವೀಟ್ ಮಾಡಲಾಗಿದೆ.