Money Saving Tips : ದುಡಿಮೆಯ ಹಣ ಉಳಿತಾಯ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್
ನಾವು ಗಳಿಸಿದ ಆದಾಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಕೂಡ ಒಂದು ಕಲೆ. ಕಡಿಮೆ ಸಂಬಳ ಇದ್ದರೂ ಕೂಡ ಅನಾವಶ್ಯಕ ಖರ್ಚು ಮಾಡಿ ತಿಂಗಳ ಅಂತ್ಯದಲ್ಲಿ ಸಾಲದ ಮೊರೆ ಹೋಗುವ ಬದಲಿಗೆ ಸಿಗುವ ಸಂಬಳದಲ್ಲಿ ಉಳಿತಾಯ ಮಾಡಿ, ಹಣಕಾಸಿನ ತೊಡಕು ಉಂಟಾದಾಗದಂತೆ ನೋಡಿಕೊಳ್ಳಬಹುದು.ಕಡಿಮೆ ಸಂಬಳ ಇದ್ರೂ ಕ್ರಮಬದ್ಧವಾಗಿ ಆರ್ಥಿಕ ಯೋಜನೆಗಳನ್ನು ಪ್ಲಾನ್ ಮಾಡಿಕೊಂಡರೆ ಹಣ ಉಳಿತಾಯ ಮಾಡಬಹುದು.
ಹಣ ಉಳಿತಾಯದ ಕೆಲವು ಸಲಹೆಗಳು ಇಲ್ಲಿವೆ.
ಉಳಿತಾಯದ ವಿಷಯದಲ್ಲಿ ಹೆಚ್ಚಿನ ಶಿಸ್ತು ರೂಢಿಸಿಕೊಂಡ ಹೂಡಿಕೆದಾರರಿಗೇ ಪ್ರತಿ ತಿಂಗಳು ನಿಶ್ಚಿತ ಮೊತ್ತವನ್ನು ದೀರ್ಘಾವಧಿವರೆಗೆ ಉಳಿತಾಯ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ, ಪ್ರತಿ ತಿಂಗಳ ದುಡಿಮೆಯ ಹಣ ಕೈಸೇರುವ ಮುನ್ನ ಸ್ವಲ್ಪ ಮೊತ್ತ ಅಥವಾ ಶೇ.1ರಷ್ಟು ಉಳಿತಾಯಕ್ಕೆ ಹೋಗುವಂತೆ ಮಾಡಿ, ನಿರಂತರ ಪಾವತಿ ಮಾಡುತ್ತಿದ್ದರೆ ಭವಿಷ್ಯದಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಾಗುತ್ತದೆ.
ಬಜೆಟ್ ಅಥವಾ ಆದಾಯ ಎಷ್ಟು ಎಂಬುದನ್ನು ನೋಡಿಕೊಳ್ಳಬೇಕು. ಮಾಸಿಕ ಬಜೆಟ್ ನಲ್ಲಿ ಕೇವಲ ಅಗತ್ಯವಾದ ವಸ್ತುಗಳನ್ನು ಖರೀದಿಸಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಯಾವುದು ಬೇಕು ಮತ್ತು ಬೇಡವಾದ ವಸ್ತು ಎಂಬುದರ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಬೇಕು. ಕಡಿಮೆ ಸಂಬಳದಲ್ಲಿ ಉಳಿಸಲು ಬಯಸಿದರೆ, ಮಾಸಿಕ ಆದಾಯದ ಒಂದು ಮೊತ್ತವನ್ನು ನೀವು ಎಲ್‌ಐಸಿ, ಎಫ್‌ಡಿ ಮೂಲಕ ಬ್ಯಾಂಕ್, ಚಿನ್ನ ಅಥವಾ ಇನ್ನಾವುದೇ ರೀತಿಯಲ್ಲಿ ಉಳಿತಾಯ ಮಾಡಬಹುದು. ಈ ಸಣ್ಣ ಹೂಡಿಕೆ ಭವಿಷ್ಯದಲ್ಲಿ ದೊಡ್ಡ ಸಹಾಯವಾಗಲಿದೆ.
ಅನೇಕ ಬಾರಿ ಜನರು ತಮ್ಮ ಸಂಬಳಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಅದಕ್ಕಿಂತ ಹೆಚ್ಚು ದುಂದು ವೆಚ್ಚ ಮಾಡುತ್ತಾರೆ. ಈ ಅಭ್ಯಾಸ ಮುಂದುವರಿಸಿದರೆ, ಸಾಲದ ಹೊರೆ ಹೆಚ್ಚಾಗಿ ಸಾಲವನ್ನು ತೀರಿಸುವುದರಲ್ಲೆ ಜೀವನ ಕಳೆಯಬೇಕಾದ ಅನಿವಾರ್ಯತೆ ಒದಗಬಹುದು. ಹೆಚ್ಚಿನವರು ಶಾಪಿಂಗ್ ಗಾಗಿ ದುಡಿಮೆಯ ಹೆಚ್ಚು ಪಾಲು ವ್ಯಯಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಬಟ್ಟೆಗೆ ಹಣ ವ್ಯರ್ಥ ಮಾಡಿದರೆ, ಮನೆಯ ಇನ್ನಿತರ ವಸ್ತುಗಳ ಖರೀದಿಗೆ ಹಣ ಸಾಲದಿರಬಹುದು. ನಾವು ಗಳಿಸಿದ ಹಣವನ್ನು ಉಳಿತಾಯ ಮಾಡುವುದು ಭವಿಷ್ಯದ ದೃಷ್ಟಿಯಿಂದ ಅತಿ ಅವಶ್ಯಕವಾಗಿದೆ.