ಕಡಬ: ದಲಿತ ಪರ ಎಂದು ಹೊಟ್ಟೆತುಂಬಿಸಿಕೊಂಡ ನೀಚರೇ ಹೆಚ್ಚು!! ವಾಟ್ಸಪ್ ಗ್ರೂಪ್ ಒಂದರಲ್ಲಿ ಹರಿದಾಡಿದ ಯುವಕನೊಬ್ಬನ ಬರಹಕ್ಕೆ ದಲಿತರಿಂದ ಆಕ್ರೋಶ!!
ಕಡಬ: ತಾಲೂಕಿನ ಬಲ್ಯ ಗ್ರಾಮದ ಯುವಕರು ಸೇರಿಕೊಂಡು ಮಾಡಿರುವ ವಾಟ್ಸಪ್ ಗ್ರೂಪ್ ಒಂದರಲ್ಲಿ ದಲಿತ ಸಮುದಾಯವನ್ನು ಹಿಯಾಳಿಸಿ ಬರೆದ ಬರಹವೊಂದು ಹರಿದಾಡಿದ ಘಟನೆಯೊಂದು ನಡೆದಿದ್ದು,ಬೆಳಕಿಗೆ ಬರುತ್ತಲೇ ದಲಿತ ಮುಖಂಡರು ಘಟನೆಯನ್ನು ಖಂಡಿಸಿ ವ್ಯಕ್ತಿಯೊಬ್ಬನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.
ಇಲ್ಲಿನ ಬಲ್ಯ ಗ್ರಾಮದ ಯುವಕರು ಸೇರಿಕೊಂಡು ವಾಟ್ಸಪ್ ಗ್ರೂಪ್ ಒಂದನ್ನು ಸೃಷ್ಟಿಸಿದ್ದು, ಗ್ರೂಪ್ ನಲ್ಲಿ ಗ್ರಾಮದ ಆಗುಹೋಗುಗಳ ಬಗ್ಗೆ, ಮುಂದಾಗುವ ಕಾಮಗಾರಿ ಅಥವಾ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಗ್ರಾಮದಲ್ಲಾಗುವ ಕಾರ್ಯಕ್ರಮ, ಜಾತ್ರೆ ಮುಂತಾದವುಗಳ ಬಗ್ಗೆ ಚರ್ಚೆಗಳು-ಅಭಿಪ್ರಾಯಗಳಿಗೆ ಮಾತ್ರ ಸೀಮಿತವಾಗಿತ್ತು.
ಆದರೆ ಸೆ.15 ರ ರಾತ್ರಿ ಗ್ರೂಪಿನಲ್ಲಿರುವ ಸದಸ್ಯನೊಬ್ಬ ಉತ್ತರಪ್ರದೇಶದಲ್ಲಿ ನಡೆದ ದಲಿತ ಬಾಲಕಿಯರಿಬ್ಬರ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಡಿಜಿಟಲ್ ಮಾಧ್ಯಮವೊಂದರಲ್ಲಿ ಬಂದಿದ್ದ ವರದಿಯೊಂದರ ಸ್ಕ್ರೀನ್ ಶಾಟ್ ತೆಗೆದು ಅದರಲ್ಲೇ ಇಲ್ಲಿನ ದಲಿತ ನಾಯಕರ ಬಗ್ಗೆ ಅವಹೇಳನ ರೀತಿಯಲ್ಲಿ ಬರಹವೊಂದನ್ನು ಬರೆದಿದ್ದ ಎನ್ನಲಾಗಿದೆ.
ಈ ವಿಚಾರ ಗ್ರೂಪಿನಲ್ಲಿರುವ ದಲಿತ ಮುಂದಾಳುಗಳ ಗಮನಕ್ಕೆ ಬಂದಿದ್ದು, ಕೂಡಲೇ ವಿಚಾರ ಅಡ್ಮಿನ್ ಗಮನಕ್ಕೂ ಬಂದಿತ್ತು.
ಬಳಿಕ ಬರಹ ಬರೆದಿದ್ದಾನೆ ಎನ್ನಲಾದ ಯುವಕನಿಗೆ ಗ್ರೂಪ್ ಅಡ್ಮಿನ್ ಎಚ್ಚರಿಕೆ ನೀಡಿದ್ದು, ದಲಿತ ಮುಖಂಡರ ಬಳಿ ಕ್ಷಮೆ ಕೇಳುವಂತೆ ತಿಳಿಸಲಾಗಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಜಗ್ಗದ ಕಡಬದ ದಲಿತ ಮುಖಂಡರು, ಇದೊಂದು ಉದ್ದೇಶಪೂರ್ವಕ ಕೃತ್ಯದಂತಿದೆ ಅಲ್ಲದೇ ಯುವಕ ಈ ಮೊದಲು ಕೂಡಾ ಇಂತಹ ಹಲವು ಬರಹಗಳನ್ನು, ಕೆಲವೊಂದು ಇಲ್ಲಸಲ್ಲದ ವಿಚಾರಗಳನ್ನು ಗ್ರೂಪ್ ನಲ್ಲಿ ಶೇರ್ ಮಾಡಿ ಸ್ವಾಸ್ತ್ಯ ಕದಡುವಂತೆ ಮಾಡಿದ್ದಾನೆ ಎನ್ನುವ ಆರೋಪವೂ ಕೇಳಿಬಂದಿತ್ತು.ಬಳಿಕ ಯುವಕ ಗ್ರೂಪ್ ನಲ್ಲೇ ಕ್ಷಮೆ ಕೇಳಿದ್ದು,ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ದಲಿತ ಮುಖಂಡರು ಗ್ರೂಪ್ ನಲ್ಲೇ ತಿಳಿಸಿದ್ದರು.
ಮುಂದುವರಿದ ಭಾಗವಾಗಿ ಸ್ಥಳೀಯ ನಾಯಕರು ಈ ವಿಚಾರಕ್ಕೆ ಎಂಟ್ರಿಯಾಗಿದ್ದು,ಪ್ರಕರಣ ದಾಖಲಿಸದಂತೆ ದಲಿತ ಮುಖಂಡರುಗಳಿಗೆ ಕರೆ ಮಾಡಿ ವಿನಂತಿಸಿದ ಪ್ರಸಂಗವೂ ನಡೆದಿದ್ದು,ಮುಂದೆ ಇಂತಹ ಘಟನೆಗಳು ಮರುಕಲಿಸದಿರಲಿ, ಹಾಗೂ ದಲಿತರ ಬಗ್ಗೆ ಯುವಕರಲ್ಲಿರುವ ಕೀಳು ಮಟ್ಟದ ಅಭಿಪ್ರಾಯಗಳು ಇಂದಿಗೇ ಕೊನೆಯಾಗಲಿ ಎನ್ನುವ ದೃಷ್ಟಿಯಿಂದ ದೂರು ದಾಖಲಿಸಿದ್ದು,ಪೊಲೀಸರು ಕ್ರಮದ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.