ದೇಶದಲ್ಲಿ ಇನ್ಮುಂದೆ ಟೋಲ್ ಕಲೆಕ್ಟ್ ಪ್ಲಾಜಾ ಗಳೇ ಇರೋದಿಲ್ಲ | ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ತರುತ್ತಿರುವ ಕೇಂದ್ರ !

ನವದೆಹಲಿ: ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಕಿರಿಕಿರಿ ಮತ್ತು ವಿಳಂಬವನ್ನು ತಡೆಯಲು ಕೇಂದ್ರ ಸರಕಾರವು ಒಂದು ಹೊಸ ಯೋಜನೆಯನ್ನು ಕೈಗೊತ್ತಿಕೊಂಡಿದೆ. ಇನ್ನು ಮುಂದೆ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಟೋಲ್ ಗಳಲ್ಲಿ ವಾಹನಗಳನ್ನು ಕ್ಯೂನಲ್ಲಿ ನಿಲ್ಲಿಸಿ ಟೋಲ್ ತೆರುವ ಕೆಲಸವಿಲ್ಲ. ಟೋಲ್ ತನ್ನಿಂದ ತಾನೇ ಆಯಾ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಕಡಿತ ಆಗಲಿದೆ. ಮುಂದೊಂದು ದಿನ ಟೋಲ್ ಪ್ಲಾಜಾ ಇಲ್ಲದೆ ಹೋದರು ಅಚ್ಚರಿ ಇಲ್ಲ !

 

ದೇಶದಲ್ಲಿ ಹೆದ್ದಾರಿ ಮತ್ತು ವಾಹನ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗೆ ಕೈ ಹಾಕಿದ ಕೇಂದ್ರ ನಿತಿನ್ ಗಡ್ಕರಿ (Nitin Gadkari) ಅವರು ಇನ್ನೊಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಶೀಘ್ರದಲ್ಲೇ ಸ್ವಯಂಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸುವ ವ್ಯವಸ್ಥೆ ಅಳವಡಿಸಲಾಗುವುದು. ಸ್ವಯಂ ಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈಗ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದೆ.

ಈಗಾಗಲೇ ಫಾಸ್ಟ್ ಟ್ಯಾಗ್ ಅಳವಡಿಕೆಗಳ ಮೂಲಕ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಆದಾಯವು ವರ್ಷಕ್ಕೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.  ಈಗ ಆಟೋ ಮೊಬೈಲ್ ನಂಬರ್‌ಪ್ಲೇಟ್ (ಸ್ವಯಂಚಾಲಿನ ನಂಬರ್‌ಪ್ಲೇಟ್ ರೀಡರ್ ಕ್ಯಾಮೆರಾ) ತಂತ್ರಜ್ಞಾನವನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ.
2018-19 ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುತ್ತಿದ್ದ ಸಮಯ ಸರಿಸುಮಾರು 8 ನಿಮಿಷಗಳಿದ್ದವು. 2020 ರಿಂದ 2022ರ ಅವಧಿಯಲ್ಲಿ ಫಾಸ್ಟ್ಯಾಗ್‌ಗಳನ್ನು ಪರಿಚಯಿಸಿದ ನಂತರ ವಾಹನಗಳ ಸರಾಸರಿ ಸಮಯವು 47 ಸೆಕೆಂಡುಗಳಿಗೆ ಇಳಿಕೆಯಾಯಿತು. ಹೀಗಿದ್ದೂ ಕೆಲವು ನಗರಗಳಲ್ಲಿ ಸಂದಿಗ್ಧ ಸಮಯಗಳಲ್ಲಿ ಹೆಚ್ಚಿನ ವಿಳಂಬವಾಗುತ್ತಿವೆ. ಅದಕ್ಕಾಗಿ ಸಂಪೂರ್ಣ ಬದಲಿ ವ್ಯವಸ್ಥೆ ಕಲ್ಪಿಸಲು ಸ್ವಯಂಚಾಲಿನ ಟೋಲ್ ಸಂಗ್ರಹಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ.

ಇದಲ್ಲದೆ ಸರಕಾರದ ಬಳಿಯಲ್ಲಿ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಇದೆ. ಸರ್ಕಾರವು ಒಟ್ಟು ಎರಡು ರೀತಿಯ ಆಯ್ಕೆಗಳನ್ನು ಎದುರುನೋಡುತ್ತಿದೆ. ಮೊದಲಿಗೆ ಟೋಲ್ ಅನ್ನು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುವುದು ಮೊದಲ ಪ್ಲಾನ್. 2ನೇ ಅಯ್ಕೆಯಾಗಿ ಕಾರಿನಲ್ಲಿ ಜಿಪಿಎಸ್ ಅಳವಡಿಸಿ ಉಪಗ್ರಹ ಆಧಾರಿತವಾಗಿ ಟೋಲ್ ಸಂಗ್ರಹ ಮಾಡುವ ವಿಧಾನವನ್ನು ಎದುರು ನೋಡುತ್ತಿದೆ. ಉಪಗ್ರಹ ವಿಧಾನ ಅನುಸರಿಸಿದರೆ ಫಾಸ್ಟ್ಯಾಗ್‌ ಬದಲಾಗಿ ಜಿಪಿಎಸ್ ಅಳವಡಿಸಬೇಕಾಗುತ್ತದೆ. ಯಾವ ಆಯ್ಕೆಯನ್ನು ಈಗಲೇ ಅಂತಿಮಗೊಳಿಸಿಲ್ಲ. ಆದರೆ ಟೋಲ್ ಪ್ಲಾಜಾಗಳಿಂದ ಮುಕ್ತಿ ನೀಡುವುದು ಖಚಿತ. ಸ್ವಯಂ ಚಾಲಿತ ಟೋಲ್ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

Leave A Reply

Your email address will not be published.