ನೀವೂ ಕೂಡ ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೀರಾ? | ಹಾಗಿದ್ರೆ ನಿಮ್ಮ ಮೇಲೂ ಕ್ರಮ ಕೈಗೊಳ್ಳುತ್ತೆ ಐಟಿ ಕಂಪನಿ!
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಉದ್ಯೋಗಿಗಳು ಮೂನ್‌ಲೈಟಿಂಗ್ ಮೇಲೆ ಹೆಚ್ಚು ಅವಲಂಬಿಸಿದ್ದರು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂತೆ ಎರಡೆರಡು ಉದ್ಯೋಗ ಮಾಡಿ ಸಂಪಾದಿಸುತ್ತಿದ್ದರು. ಆದರೆ, ಇದಕ್ಕೆಲ್ಲಾ ಈಗ ಕತ್ತರಿ ಹಾಕಲು ಕಂಪನಿಗಳು ಮುಂದಾಗಿವೆ.
‘ಮೂನ್ ಲೈಟಿಂಗ್’ ಎಂದರೆ ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೇತನವನ್ನೂ ಡಬಲ್ ಮಾಡಿಕೊಳ್ಳುವ ವಿಧಾನವಾಗಿದೆ. ಆದರೆ, ಇದೀಗ ಇದರಿಂದ ತಮ್ಮ ಕಾರ್ಯ ಕ್ಷಮತೆಗೆ ಹಿನ್ನಡೆಯಾಗುತ್ತಿದೆ ಎಂಬ ಕಾರಣಕ್ಕೆ ಐಟಿ ಕಂಪನಿಗಳು ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿವೆ.
‘ಮೂನ್ ಲೈಟಿಂಗ್’ ಅವಕಾಶವನ್ನು ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ನೀಡುತ್ತಿದ್ದು, ಆದರೆ ಭಾರತದಲ್ಲಿ ಸ್ವಿಗ್ಗಿ ಸೇರಿದಂತೆ ಕೆಲವೊಂದು ಕಂಪನಿಗಳನ್ನು ಹೊರತುಪಡಿಸಿ ಬಹುತೇಕ ಕಂಪನಿಗಳು ಅವಕಾಶ ನೀಡುವುದಿಲ್ಲ. ಇದೀಗ ವಿಪ್ರೊ ಎರಡೆರಡು ಕಡೆ ಕೆಲಸ ಮಾಡುವ ಪದ್ಧತಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಈಗ ಇನ್ಫೋಸಿಸ್ ಕೂಡ ಅದೇ ಮಾರ್ಗ ಅನುಸರಿಸಿದೆ.
‘ಮೂನ್ ಲೈಟಿಂಗ್’ ವಿರುದ್ಧ ಉದ್ಯೋಗಿಗಳಿಗೆ ಇನ್ಫೋಸಿಸ್ ಕಠಿಣ ಎಚ್ಚರಿಕೆ ನೀಡಿದ್ದು, ಕಂಪನಿಯ ನಿಯಮದ ಪ್ರಕಾರ ಇದಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸುವ ಉದ್ಯೋಗಿಗಳಿಗೆ ವಜಾ ಸೇರಿದಂತೆ ಇತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ. ಈ ಕುರಿತಂತೆ ತನ್ನ ಎಲ್ಲಾ ಉದ್ಯೋಗಿಗಳಿಗೆ ಇ ಮೇಲ್ ಸಂದೇಶ ರವಾನಿಸಿದೆ ಎಂದು ತಿಳಿದುಬಂದಿದೆ.
ನಿಮ್ಮ ಆಫರ್ ಲೆಟರ್‌ನಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ‘ಇನ್ಫೋಸಿಸ್‌ನ ಒಪ್ಪಿಗೆಯಿಲ್ಲದೆ ಯಾವುದೇ ರೀತಿಯ ವ್ಯವಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಇತರ ಸಂಸ್ಥೆ/ಸಂಸ್ಥೆಯ ನಿರ್ದೇಶಕ/ಪಾಲುದಾರ/ಸದಸ್ಯ/ಉದ್ಯೋಗಿಯಾಗಿ ಪೂರ್ಣ ಸಮಯ ಅಥವಾ ಅರೆಕಾಲಿಕ ಉದ್ಯೋಗವನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿರುತ್ತೀರಿ. ಕೆಲವೊಮ್ಮೆ ಕಂಪನಿಯು ಸೂಕ್ತವೆಂದು ಭಾವಿಸುವ ಯಾವುದೇ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಒಪ್ಪಿಗೆಯನ್ನು ನೀಡಬಹುದು ಮತ್ತು ಕಂಪನಿಯು ತನ್ನ ವಿವೇಚನೆಯಿಂದ ಯಾವುದೇ ಸಮಯದಲ್ಲಿ ಇದನ್ನು ಹಿಂಪಡೆಯಬಹುದು,” ಎಂದು ಇನ್ಫೋಸಿಸ್ ಹೇಳಿದೆ. ಈ ಮೂಲಕ ಉದ್ಯೋಗಿಗಳಿಗೆ ಬಿಗ್ ಶಾಕ್ ಎದುರಾಗಿದೆ.