ಟ್ರಾಫಿಕ್ ಜಾಮ್ ಸಂಕಟ | 3 ಕಿ.ಮೀ.ಓಡಿಕೊಂಡೇ ಬಂದು ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯ !!!
ಹಿರಿಯರೊಂದು ಮಾತು ಹೇಳ್ತಾರೆ, ‘ವೈದ್ಯೋ ನಾರಾಯಣೋ ಹರಿ’ ಅಂತ.ಅಂದರೆ ವೈದ್ಯರು ದೇವರಿಗೆ ಸಮಾನ ಅಂತ. ಆ ಮಾತಿಗೆ ತಕ್ಕವರೇ ಈ ಡಾಕ್ಟರ್. ಬೆಂಗಳೂರಿನ ವೈದ್ಯ ಗೋವಿಂದ ನಂದಕುಮಾರ್ ಎಂಬುವವರು ತಮ್ಮ ಅತ್ಯುತ್ತಮ ಕಾರ್ಯದಿಂದ ಮೆಚ್ಚುಗೆ ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು.
ದೇವರಂತಹ ಈ ಡಾಕ್ಟರ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಇದೇನು ಸಾಮಾನ್ಯವಲ್ಲ ಬೆಂಗಳೂರು ಸಿಟಿಯಲ್ಲಿ. ಆದರೆ ವಿಷಯ ಅದಲ್ಲ. ಆದರೆ ಈ ವೈದ್ಯರಿಗೆ ಸಕಾಲದಲ್ಲಿ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಲೇ ಬೇಕಿತ್ತು. ಅದಕ್ಕಾಗಿ ಇವರು ಕಾರನ್ನು ಅಲ್ಲಿಯೇ ಬಿಟ್ಟು 3 ಕಿ.ಮೀ ಓಡಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ.
ಆಗಸ್ಟ್ 30 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೈದ್ಯ ಗೋವಿಂದ ನಂದಕುಮಾರ್ ಎಂಬುವವರು ಬೆಂಗಳೂರಿನ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 30 ರ ಮಂಗಳವಾರ ರೋಗಿಯೊಬ್ಬರಿಗೆ ತುರ್ತು ಲ್ಯಾಪ್ರೋಸ್ಕೋಪಿಕ್ ಗಾಲ್ ಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಹೊರಟಿದ್ದಾಗ ಅವರು ವಿಪರೀತ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಸ್ಥಳದಿಂದ ಆಸ್ಪತ್ರೆ ತಲುಪಲು ಕೇವಲ 10 ನಿಮಿಷ ಸಾಕಾಗಿದ್ದರೂ, ಟ್ರಾಫಿಕ್ ಕಾರಣಕ್ಕೆ ಗೂಗಲ್ ಮ್ಯಾಪ್‌ನಲ್ಲಿ 45 ನಿಮಿಷ ತೋರಿಸಿದೆ.
ಅಂದು ಬೆಳಗ್ಗೆ 10 ಗಂಟೆಯ ನಿಗದಿತ ಸಮಯಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಉದ್ದೇಶಕ್ಕೆ ಚಾಲಕನಿಗೆ ಕಾರು ಆಸ್ಪತ್ರೆಗೆ ತರಲು ಸೂಚಿಸಿ ತಾವು ಓಡಿಕೊಂಡೇ ಹೋಗಿ ಆಸ್ಪತ್ರೆ ತಲುಪಿದ್ದಾರೆ. ನಿಗದಿತ ಸಮಯಕ್ಕೆ ತಲುಪಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಿ ರೋಗಿಯ ಪ್ರಾಣ ಉಳಿಸಿದ್ದಾರೆ. ಇದಲ್ಲವೇ ವೃತ್ತಿ ಮೇಲೆ ಇರುವ ಪ್ರೀತಿ, ಮಮತೆ, ಬದ್ಧತೆ, ಜವಾಬ್ದಾರಿ ಎಂದು.
“ಆ.30 ರ ಬೆಳಗ್ಗೆ 10 ಗಂಟೆಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದೆ. ಶಸ್ತ್ರಚಿಕಿತ್ಸೆಗೆ ತಡವಾಗುತ್ತದೆ ಎಂಬ ಆತಂಕವಿತ್ತು. ಬೇರೆ ದಾರಿಯಿಲ್ಲದೇ ನಾನು ಗೂಗಲ್ ಮ್ಯಾಪ್ ನೆರವಿನಿಂದ ಆಸ್ಪತ್ರೆಗೆ ತೆರಳಲು ಮುಂದಾದೆ. ಕಾರಿನಿಂದ ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡಿ ಉಳಿದ ಪ್ರಯಾಣವನ್ನು ಕವರ್ ಮಾಡಲು ನಿರ್ಧರಿಸಿದೆ. ನಾನು ನಿಯಮಿತವಾಗಿ ಜಿಮ್ ಮಾಡುವುದರಿಂದ ನನಗೆ ಓಡುವುದು ಸುಲಭವಾಯಿತು. ಆಸ್ಪತ್ರೆಗೆ 3 ಕಿ.ಮೀ ಓಡಿಕೊಂಡು ಬಂದು ಶಸ್ತ್ರಚಿಕಿತ್ಸೆಯ ಸಮಯಕ್ಕೆ ತಲುಪಿದೆ” ಡಾ.ಗೋವಿಂದ ನಂದಕುಮಾರ್ ಅವರ ಮಾತು.