ಮರ್ಸಿಡೆಸ್ ಕಾರಿನಲ್ಲಿ ಉಚಿತ ಪಡಿತರ ಕೊಂಡೊಯ್ದ ಶ್ರೀಮಂತ ಬಿಪಿಲ್ ಕಾರ್ಡ್ ದಾರ!!
ಪಡಿತರ ಎನ್ನುವುದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಸೌಲಭ್ಯವಾಗಿದೆ. ಆದ್ರೆ, ಇದೀಗ ಆಸ್ತಿ, ಕಾರು ಹೀಗೆ ಶ್ರೀಮಂತರಿದ್ದರೂ ಇಂತಹ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಹೌದು. ಇಂತಹ ಒಂದು ಘಟನೆಯ ವೀಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಕ್ತಿಯೊಬ್ಬ ಸರ್ಕಾರಿ ಪಡಿತರ ಅಂಗಡಿಗೆ ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಬಂದು ಸರ್ಕಾರ ನೀಡುವ ಉಚಿತ ಪಡಿತರವನ್ನು ಕೊಂಡೊಯ್ದ ಘಟನೆ ಪಂಜಾಬ್‌ನ ಹೊಶಿಯಾರ್ಪುರದಲ್ಲಿ ನಡೆದಿದೆ.
ಮರ್ಸಿಡಿಸ್ ಅನ್ನು ಓಡಿಸಿದ ವ್ಯಕ್ತಿಯ ಹೆಸರು ರಮೇಶ್ ಸೈನಿ. ವಾಹನವು ತನ್ನ ಸಂಬಂಧಿಯದ್ದು ಎಂದು ಹೇಳಿಕೊಂಡಿದ್ದಾನೆ. ನಮ್ಮ ಸಂಬಂಧಿ ಭಾರತದಲ್ಲಿ ವಾಸಿಸುತ್ತಿಲ್ಲ ಮತ್ತು ಕಾರನ್ನು ನಮ್ಮ ಸ್ಥಳದಲ್ಲಿಯೇ ನಿಲ್ಲಿಸುತ್ತಾರೆ. ಇದು ಡೀಸೆಲ್ ಕಾರು, ಆದ್ದರಿಂದ ನಾವು ಅದನ್ನು ಕೆಲವು ದಿನಗಳಿಂದ ಚಲಾಯಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನನಗೆ ಸಣ್ಣ ವೀಡಿಯೊಗ್ರಫಿ ವ್ಯಾಪಾರವಿದೆ, ನನ್ನ ಮಕ್ಕಳು ಸಹ ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ಅವರನ್ನು ಖಾಸಗಿ ಶಾಲೆಗೆ ಕಳುಹಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ಸೈನಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪಂಜಾಬ್‌ನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಲಾಲ್ ಚಂದ್ ಕತರುಚಕ್ ಅವರು ನಿಜವಾದ ಫಲಾನುಭವಿಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕಾರಿನಲ್ಲಿ ಬಂದ ವ್ಯಕ್ತಿ ಬಡತನ ರೇಖೆಗಿಂತ ಕೆಳಗಿರುವ ವರ್ಗದ ಕಾರ್ಡ್ ಅನ್ನು ಹೊಂದಿರುವುದಾಗಿ ತಿಳಿದುಬಂದಿದೆ. ರೇಷನ್ ತೆಗೆದುಕೊಂಡು ಕಾರಿನ ಒಳಗೆ ತುಂಬುತ್ತಿರುವ ವಿಡಿಯೋವನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.