ಗಮನಿಸಿ ಸಾರ್ವಜನಿಕರೇ | ಆಯುಷ್ಮಾನ್ ಕಾರ್ಡ್ ವಿತರಣೆ ಸ್ಥಗಿತ
ಮಂಗಳೂರು : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಆರೋಗ್ಯ ಕಾರ್ಡ್ ಎಂದರೆ ಆಯುಷ್ಮಾನ್ ಕಾರ್ಡ್ . ಈಗ ಬಂದಿರುವ ಮಾಹಿತಿ ಪ್ರಕಾರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಇದರ ಬದಲು ದೇಶವ್ಯಾಪಿ ಬಳಸುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ ಡಿಜಿಟಲ್ ಕಾರ್ಡ್ ವಿತರಣೆಗೆ ನಿರ್ಧಾರ ಮಾಡಲಾಗಿದೆ. ಇದರ ಮೂಲಕ ದೇಶದ ಯಾವುದೇ ಭಾಗದಲ್ಲೂ ಆರೋಗ್ಯ ಸೇವೆ ಪಡೆಯಬಹುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದರು.
ಹಾಗಾಗಿ ಜನರೇ ಗಮನಿಸಿ. ಈಗಾಗಲೇ ವಿತರಿಸಿರುವ ಆರೋಗ್ಯ ಕಾರ್ಡ್‌ಗಳು ಸದ್ಯದಲ್ಲೇ ಅಮಾನ್ಯವಾಗಲಿದೆ. ಅದರ ಬದಲು ಎಟಿಎಂ ಕಾರ್ಡ್ ರೀತಿಯ ಡಿಜಿಟಲ್ ಮಾದರಿಯ ಕಾರ್ಡ್ ನೀಡಲಾಗುವುದು ಎಂದು ವರದಿಯಾಗಿದೆ. ಇದಕ್ಕಾಗಿ ನಾಗರಿಕರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿ ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದ ಮೂಲಕ ಉಚಿತವಾಗಿ ಹೊಸ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಈಗಾಗಲೇ ಆಯುಷ್ಮಾನ್ ಕಾರ್ಡ್ ಹೊಂದಿದ್ದವರು ಕೂಡ ಸರಕಾರಿ ಆರೋಗ್ಯ ಸೇವೆ ಪಡೆಯಲು ಈ ಹೊಸ ಕಾರ್ಡ್ ಮಾಡಿಸಬೇಕು. ಕಾರ್ಡ್ ನೋಂದಣಿಗೆ ದ.ಕ. ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ನಗರದ ಆರೋಗ್ಯ ಇಲಾಖೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಗಿದೆ.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ದಾರರು ಸಹಿತ ಒಟ್ಟು 17,40,239 ಮಂದಿಯ ಗುರಿ ಇರಿಸಿಕೊಂಡಿದ್ದೇವೆ. 3 ತಿಂಗಳ ಒಳಗಾಗಿ ಈ ಗುರಿ ಸಾಧಿಸುತ್ತೇವೆ. ಈ ಕಾರ್ಡ್ ಮೂಲಕ ಬಿಪಿಎಲ್ ಕುಟುಂಬಗಳು ವರ್ಷದಲ್ಲಿ ಗರಿಷ್ಠ 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಗಳಿಗೆ ಗರಿಷ್ಠ 1.50 ಲಕ್ಷದ ವರೆಗಿನ ಚಿಕಿತ್ಸೆ ವೆಚ್ಚ ಪಡೆಯಬಹುದು. ಸದ್ಯ ಕೆಲವು ದಿನಗಳ ಮಟ್ಟಿಗೆ ಹಳೆಯ ಕಾರ್ಡ್‌ನಲ್ಲೂ ಸೌಲಭ್ಯ ಸಿಗಲಿದೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮೂಲಕವೂ ಸೇವೆ ಪಡೆಯಬಹುದು.