ಗ್ರಾಹಕರು ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಬ್ಯಾಂಕ್!! ತನಿಖೆಯ ಬಳಿಕ ಪರಿಹಾರ ಸಿಕ್ಕಿದ್ಯಾರಿಗೆ!?
ಧಾರವಾಡ:ಗ್ರಾಹಕರೊಬ್ಬರ ಕನ್ನಡದಲ್ಲಿ ಬರೆದ ಚೆಕ್ ಒಂದನ್ನು ಬ್ಯಾಂಕ್ ನಿರಾಕರಿಸಿ ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶದಂತೆ ಬ್ಯಾಂಕಿಗೆ ದಂಡ ಪರಿಹಾರ ಪಾವತಿಸುವಂತೆ ಸೂಚಿಸಿದ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಧಾರವಾಡದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಹಕರಾಗಿರುವ ವಾದಿರಾಜಾಚಾರ್ಯ ಇನಾಮದಾರ ಎಂಬವರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಕನ್ನಡದಲ್ಲಿ ಚೆಕ್ ಬರೆದು ನೀಡಿದ್ದರು ಎನ್ನಲಾಗಿದೆ.
ಈ ವೇಳೆ ಕನ್ನಡದಲ್ಲಿ ಬರೆದ ಚೆಕ್ ನ್ನು ಬ್ಯಾಂಕ್ ತಿರಸ್ಕರಿಸಿದ್ದು, ಈ ಬಗ್ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಆಯೋಗ, ಕನ್ನಡದಲ್ಲಿ ಚೆಕ್ ಬರೆದಿರುವುದಕ್ಕಾಗಿ ಅಮಾನ್ಯ ನಡೆಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ದಂಡ ಪಾವತಿಸಿದೆ.
ಆಯೋಗದ ಅಧ್ಯಕ್ಷರಾದ ಈಶ್ವಪ್ಪ ಭೂತೆ, ಸದಸ್ಯರಾದ ಬೋಳಶೆಟ್ಟಿ, ಪಿ.ಸಿ ಹಿರೇಮಠ್ ಅವರಿದ್ದ ಆಯೋಗ ಈ ತೀರ್ಪು ನೀಡಿದ್ದು, ದಂಡ ಸಹಿತ ಪರಿಹಾರ ಮೊತ್ತವಾಗಿ 85,177 ಹಣ ಬ್ಯಾಂಕ್ ಪಾವತಿಸಬೇಕಾಗಿದೆ.