KSRTC ಬಸ್ ಕಂಡಕ್ಟರ್ ನ ಗೂಂಡಾ ವರ್ತನೆ, ಪ್ರಯಾಣಿಕನ ನೇರ ಎದೆಗೆ ಒದ್ದು ಬಸ್ ನಿಂದ ಬೀಳಿಸಿ ಕ್ರೌರ್ಯ !
ಪುತ್ತೂರು: ಕೋಳಿಗೆ ಚೀಟಿ ಹರಿದ, ‘ಕಲಕುಂಡಿ ‘ಗೆ ಟಿಕೆಟ್ ಎಳೆದು ‘ಕನ್ನಡ ಕೊಂದು’ ಸುದ್ದಿಯಾಗಿ ಜನರಿಂದ ಉಗಿಸಿಕೊಂಡ ಕೆಂಪು ಡಬ್ಬದ ‘ ಕೆಎಸ್‌ಆರ್ಟಿಸಿ ‘ ಮತ್ತೆ ದುರ್ವರ್ತನೆ ತೋರಿದೆ. ಜನರನ್ನು ಒಯ್ಯಲು ಜನರಿಗಾಗಿ ಇರುವ ಬಸ್ ಸಿಬ್ಬಂದಿ ಅನ್ನದಾತ ಪ್ರಯಾಣಿಕನ ನೇರ ಎದೆಗೆ ಒದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಕೆಎಸ್‌ಆರ್ಟಿಸಿ ಬಸ್ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ತುಳಿದು ಆತನನ್ನು ರಸ್ತೆಗೆ ‘ ಧಡಕ್ಕನೆ ‘ ದೂಡಿ ಹಾಕಿದ ಅಮಾನವೀಯ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿರುವುದಾಗಿ ವಿಡಿಯೋ ವೈರಲ್ ಅಗಿದೆ.
ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ಅಲ್ಲಿ, ಕೆಎ 21 ಎಫ್ 0002 ನಂಬರ್‌ನ, ಪುತ್ತೂರು ರಿಜಿಸ್ಟ್ರೇಷನ್ ನ ಕೆಎಸ್ಆರ್ಟಿಯ ಕೆಂಪು ಬಸ್ಸು ಬಂದು ನಿಂತಿತ್ತು. ಈ ಮಧ್ಯ ಬಸ್ಸಿನೊಳಗೆ ಹತ್ತಿದ ಪ್ರಯಾಣಿಕರಿಗೂ ನಿರ್ವಾಹಕನಿಗೂ ಜಗಳ ಹತ್ತಿಕೊಂಡಿತ್ತು. ಆ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಕಾಲಿನಿಂದ ತುಳಿದು ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇಲ್ನೋಟಕ್ಕೆ ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದು ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆ ಎಸೆಯುತ್ತಾರೆ. ಬಸ್ಸಿನಿಂದ ಕೆಳಗಿಳಿಸಲು ನಿರ್ವಾಹಕ ಪ್ರಯಾಣಿಕನಿಗೆ ಕೈಯಿಂದ ಎರಡೇಟು ಹೊಡೆದು ಜೋರಾಗಿ ಹಲ್ಲೆ ನಡೆಸುತ್ತಾನೆ. ಪ್ರಯಾಣಿಕ ಬಸ್ಸಿನಿಂದ ಇಳಿಯಲು ಕೇಳದ ಸಂದರ್ಭ, ಕೊನೆಗೆ ಕಾಲಿನಿಂದ ಪ್ರಯಾಣಿಕನ ನೇರ ಎದೆಗೆ ಜೋರಾಗಿ ತುಳಿದು ಬಿಡುತ್ತಾನೆ ಆ ದರ್ಪದ ಕಂಡಕ್ಟರ್.
ಆ ಏಟಿಗೆ ಬಡಪಾಯಿ ನರಪೇತಲ ಪ್ರಯಾಣಿಕ ರಸ್ತೆಗೆ ದೊಪ್ಪನೆ ಬಿದ್ದು ಬಿಡುತ್ತಾನೆ ಬಿದ್ದ ವ್ಯಕ್ತಿಗೆ ಬೈಯುತ್ತಾ ರಸ್ತೆಗೆ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗುವ ವಿಡಿಯೋ ವೈರಲ್ ಅಗುತ್ತಿದೆ. ಈ ಕೆಎಸ್ಆರ್ಟಿಸಿ ನಿರ್ವಾಹಕನ ವರ್ತನೆಗೆ ವ್ಯಾಪಕ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದೆ. ಅನ್ನದ ಬಟ್ಟಲಿಗೆ ಒದ್ದ ನಿರ್ವಾಹಕನ ಮೇಲೆ ಕಠಿಣ ಕಮ ಕೈಗೊಳ್ಳಲು ಕೂಗು ಎದ್ದಿದೆ.