ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಮಿತ್ತೂರಿನ ಫ್ರೀಡಮ್ ಕಮ್ಯುನಿಟಿ ಹಾಲ್‌ಗೆ ಎನ್‌ಐಎ ಅಧಿಕಾರಿಗಳು ದಾಳಿ, ಹಲವು ಗೌಪ್ಯ ಮಾಹಿತಿ ಲಭ್ಯ
ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.6 ರ ಮುಂಜಾನೆ ವೇಳೆ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಮ್ ಕಮ್ಯುನಿಟಿ ಹಾಲ್‌ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವಾರು ಗೌಪ್ಯ ಮಾಹಿತಿಗಳು ಬಹಿರಂಗಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಇದೇ ಸೆಂಟರ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಸದ್ಯ ಈ ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಈ ತರಬೇತಿ ಸೆಂಟರ್ ನ ಚಲನವಲನಗಳ ಬಗ್ಗೆ ಈ ಹಿಂದೆಯೂ ಸ್ಥಳೀಯ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು ಎನ್ನುವ ಆರೋಪ ಕೇಳಿಬರುತ್ತಿದೆ. ಈಗ ಈ ಆರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ. ಖುದ್ದು ರಾಷ್ಟ್ರೀಯ ತನಿಖಾ ತಂಡವೇ ಮಿತ್ತೂರಿಗೆ ಆಗಮಿಸಿದ್ದು, ಈ ತರಬೇತಿ ಕೇಂದ್ರದ ಚಟುವಟಿಕೆಗಳ ಮೇಲೆ ತನಿಖೆ ಆರಂಭಿಸಿದೆ. ತನಿಖೆಯ ವೇಳೆ ಏನೆಲ್ಲಾ ರಹಸ್ಯ ಮಾಹಿತಿಗಳು ಲಭ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.