2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ದೇಶಾದ್ಯಂತ ಉಚಿತ ವಿದ್ಯುತ್ – ಕೆಸಿಆರ್

ಚುನಾವಣೆಯಲ್ಲಿ ಪಕ್ಷ ಗೆಲುವು ಕಾಣಲು ಹೆಚ್ಚಿನ ರಾಜಕಾರಣಿಗಳು ಭರವಸೆಯನ್ನು ನೀಡುವುದರ ಮೂಲಕ ಮತ ಕೇಳುತ್ತಾರೆ. ಅದರಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ.

ನಿಜಾಮಾಬಾದ್‍ನಲ್ಲಿ ಸಮಗ್ರ ಜಿಲ್ಲಾ ಕಚೇರಿ ಸಂಕೀರ್ಣ ಹಾಗೂ ಟಿಆರ್ ಎಸ್ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯ ನಂತರ ಈ ದೇಶದ ಎಲ್ಲ ರೈತರು ಬಿಜೆಪಿಯೇತರ ಬಾವುಟ ಹಾರಿಸಲಿದ್ದಾರೆ. ನಾವು ಈ ಬಡವರ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಮತ್ತು ನಮ್ಮದೇ ಸರ್ಕಾರ ದೆಹಲಿಯಲ್ಲಿ ಕೂಡ (ರಾಷ್ಟ್ರೀಯ ಮಟ್ಟದಲ್ಲಿ) ಅಧಿಕಾರಕ್ಕೆ ಬರಲಿದೆ. ನಾನು ಈ ದೇಶದ ರೈತರಿಗೆ ಸಹಿ ಸುದ್ದಿಯನ್ನು ನೀಡುತ್ತಿದ್ದೇನೆ. ನೀವು ಬಿಜೆಪಿಯೇತರ ಸರ್ಕಾರವನ್ನು ಆರಿಸಿದರೆ, ತೆಲಂಗಾಣದಂತೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ರೈತರು ಸೇರಿದಂತೆ ಎಲ್ಲರಿಗೂ 24/7 ವಿದ್ಯುತ್ ನೀಡುವ ಯಾವುದೇ ರಾಜ್ಯ ಈ ದೇಶದಲ್ಲಿ ಇಲ್ಲ ಮತ್ತು ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ಆರ್ಥಿಕ ನೆರವು ನೀಡುವ ಏಕೈಕ ರಾಜ್ಯ ತೆಲಂಗಾಣವಾಗಿದೆ ಎಂದು ಹೇಳಿದರು.ಪಕ್ಷಗಳು ಜನರಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಸಂಬಂಧ ಸಲ್ಲಿಸಲಾಗಿರುವ ಸಾಕಷ್ಟು ಅರ್ಜಿಗಳನ್ನು ಹೆಚ್ಚಿನ ಪರಾಮರ್ಶೆಗೆ ಒಳಪಡಿಸುವ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಕೆಲವು ದಿನಗಳ ಹಿಂದೆ, ಮೂವರು ಸದಸ್ಯರಿರುವ ನ್ಯಾಯಮೂರ್ತಿಗಳ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸಿತ್ತು. ಈ ಬೆಳವಣಿಗೆಯ ನಂತರದಲ್ಲಿ ತೆಲಂಗಾಣ ಸಿಎಂ ಅವರಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ.

ಜೊತೆಗೆ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಸರ್ಕಾರವು ಈಗ ರಸಗೊಬ್ಬರ, ಡೀಸೆಲ್ ಮತ್ತು ಇತರ ಇನ್‍ಪುಟ್‍ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕೆಲಸ ಕಷ್ಟಕರ ಎಂಬಂತೆ ರೈತರಿಗೆ ತೋರಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಕೃಷಿ ಭೂಮಿಯನ್ನು ಕಿತ್ತುಕೊಂಡು ಕಾಪೊರೇಟ್‍ಗಳಿಗೆ ನೀಡಬಹುದು ಎಂದು ಆರೋಪಿಸಿದರು. ಅನುತ್ಪಾದಕ ಆಸ್ತಿ (ಎನ್‍ಪಿಎ) ಹೆಸರಿನಲ್ಲಿ 12 ಲಕ್ಷ ಕೋಟಿ ಮೌಲ್ಯದ ಸಾಲವನ್ನು ಮನ್ನಾ ಮಾಡಿರುವ ಕೇಂದ್ರವು ದೇಶದ ಎಲ್ಲ ರೈತರಿಗೆ 1.45 ಲಕ್ಷ ಕೋಟಿ ವೆಚ್ಚದ ಉಚಿತ ವಿದ್ಯುತ್ ನೀಡಲು ಇಚ್ಛಿಸುತ್ತಿಲ್ಲ ಎಂದು ಕಿಡಿಕಾರಿದರು.

Leave A Reply

Your email address will not be published.