6 ರ ಬಾಲಕಿಗೆ ಆಕೆಯ ಹೆಸರೇ ಆಪತ್ತು : ಅಷ್ಟಕ್ಕೂ ಆಗಿದ್ದೇನು? ಇದೊಂದು ವಿಚಿತ್ರ ಪ್ರಕರಣ
ಅಮೆಜಾನ್ (Amazon) ಸಂಸ್ಥೆಯ ಎಲ್ಲಾ ಸಾಧನಗಳು ಎಲ್ಲರಿಗೂ ಇಷ್ಟವಾಗುತ್ತೆ. ಇತ್ತೀಚೆಗೆ ಅಲೆಕ್ಸಾ ( Alexa) ಎಂಬ ಹೊಸ ಸಾಧನವನ್ನು ಅಮೆಜಾನ್ ಸಂಸ್ಥೆ ಬಿಡುಗಡೆ ಮಾಡಿದೆ. ಆದರೆ ಇದಕ್ಕೆ ಇಟ್ಟ ಹೆಸರು ಓರ್ವ ಬಾಲಕಿಗೆ ಕುತ್ತು ತಂದಿದೆ. ಹೇಗೇ ಅಂತೀರಾ ?
ಸಾಮಾನ್ಯವಾಗಿ ಅಲೆಕ್ಸಾ ಎಂಬ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ಅಮೆಜಾನ್ ಸಾಧನಗಳು ಎಂದು. ಅಮೆಜಾನ್ ಅಲೆಕ್ಸಾ ಸಾಧನ ಆದೇಶ ಕೊಟ್ಟಂತೆ ಹಾಡುಗಳನ್ನು ಪ್ಲೇ ಮಾಡುತ್ತಾ ಕೇಳುಗರಿಗೆ ಮನರಂಜನೆ ನೀಡುವುದು ಎಲ್ಲರಿಗೂ ತಿಳಿದಿದೆ.
ಆದರೆ ಇಲ್ಲೊಬ್ಬ ಹುಡುಗಿಯ ಹೆಸರನ್ನು ಆಕೆಯ ಪೋಷಕರ ಈ ಅಮೆಜಾನ್ ಸಾಧನದ ಕಾರಣದಿಂದ ಬದಲಾಯಿಸಿದ್ದಾರೆ. ಯಾಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಹಾಗಾದರೆ ಬನ್ನಿ ಇದರ ಕಹಾನಿ ಏನು ಎಂದು ನಾವು ತಿಳಿಸುತ್ತೇವೆ.
ಹುಡುಗಿಯ ಹೆಸರು ಬದಲಾಯಿಸುವುದಕ್ಕೂ ಮತ್ತು ಅಲೆಕ್ಸಾ ಸಾಧನಕ್ಕೂ ಯಾವ ರೀತಿಯ ಸಂಬಂಧ ಅಂತೀರಾ? ವಿಷಯ ಏನೆಂದರೆ, ಈ ಹುಡುಗಿಯ ಹೆಸರು ಕೂಡಾ ಅಲೆಕ್ಸಾ ಅಂತ.
ಅಮೆಜಾನ್ ನ ಅಲೆಕ್ಸಾ ಸಾಧನಗಳು ಮಾರುಕಟ್ಟೆಯನ್ನು ಪ್ರವೇಶಿಸಿ ಶೀಘ್ರದಲ್ಲಿಯೇ ತುಂಬಾನೇ ಜನಪ್ರಿಯವಾದವು.
ಹಾಗಾಗಿ ಈ ಆರು ವರ್ಷದ ಬಾಲಕಿ ಅಲೆಕ್ಸಾಗೆ ಆಕೆಯ ಸ್ನೇಹಿತರು ಹೆಸರನ್ನು ಬಳಸಿ ಅಪಹಾಸ್ಯ ಮಾಡೋಕೆ ಶುರು ಮಾಡಿದರು. ಧ್ವನಿ ಆಜ್ಞೆಯಿಂದ ನಿರ್ವಹಿಸಲ್ಪಡುವ ಸಾಧನದಂತೆ , ಬಾಲಕಿಗೆ ಆದೇಶ ನೀಡಿ ಮನರಂಜನೆ ಪಡೆದುಕೊಳ್ಳುವ ಕೆಲವರು ಮಾಡತೊಡಗಿದ್ದಾರೆ. ಜನರ ಈ ವರ್ತನೆಯಿಂದ ಬೇಸತ್ತ ಆಕೆಯ ಪೋಷಕರು, ಜರ್ಮನಿಯ ಗೊಯೆಟ್ಟಿಂಗೆನ್ ನ ನಗರ ಅಧಿಕಾರಿಗಳಿಗೆ ಆಕೆಯ ಹೆಸರು ಬದಲಾಯಿಸಲು ಅರ್ಜಿ ಸಲ್ಲಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ನ ವರದಿಯ ಪ್ರಕಾರ, ಹೆಸರು ಬಳಸಿಕೊಂಡು ಜನರು ನಿರಂತರವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ಅಲ್ಲದೇ ಅಪರಿಚಿತ ವ್ಯಕ್ತಿಯೊಬ್ಬ ಅಲೆಕ್ಸಾಳ ಬಳಿ ಡ್ಯಾನ್ಸ್ ಮಾಡುವಂತೆ ಆದೇಶಿಸಿದ್ದಾನೆಂದು ಮಹಿಳೆ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಮಗಳ ಹೆಸರು ಬದಲಾಯಿಸುವ ದಂಪತಿಗಳ ಮೊದಲ ಪ್ರಯತ್ನ ತಿರಸ್ಕೃತವಾಗಿದ್ದರಿಂದ ಪೋಷಕರು ನಗರದ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ಈ ಹೆಸರು “ಭಾವನಾತ್ಮಕವಾಗಿ ಹೊರೆಯಾಗಿದೆ’ ಎಂದು ನ್ಯಾಯಾಲಯದ ಅಧಿಕಾರಿಗಳು ತೀರ್ಮಾನಿಸಿದ್ದಾರೆ, ಅಲ್ಲದೆ ನ್ಯಾಯಾಲಯ
ಪೋಷಕರಿಗೆ ಮಗಳ ಹೆಸರು ಬದಲಾಯಿಸಲು ಅವಕಾಶ ಕಲ್ಪಿಸಿದೆ ಎಂದು ತಿಳಿದುಬಂದಿದೆ.
‘ಅಲೆಕ್ಸಾ’ ಸಾಧನವು ವಿಶ್ವದಾದ್ಯಂತ ಜನಪ್ರಿಯವಾಗಿದ್ದು, 2019 ರ ಜನವರಿಯಲ್ಲಿ ಅಮೆಜಾನ್ ಇದುವರೆಗೂ 100 ಮಿಲಿಯನ್ ಗೂ ಹೆಚ್ಚು ಅಲೆಕ್ಸಾ ಸಾಧನಗಳನ್ನು ಮಾರಾಟ ಮಾಡಿದೆ. ಅಷ್ಟು ಮಾತ್ರವಲ್ಲದೇ ದೈತ್ಯ ಮಾರುಕಟ್ಟೆಯಲ್ಲಿ ತನ್ನದೇ ಛಾಪನ್ನು ಮೂಡಿಸಿದೆ.