ರಾಜ್ಯದಲ್ಲಿ ನೂತನ 4,244 ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ರಾಜ್ಯದಲ್ಲಿ ನೂತನ 4,244 ಅಂಗನವಾಡಿ ಕೇಂದ್ರಗಳ ಆರಂಭ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಕಡಿಮೆ ಆದಾಯದ ಜನಸಂಖ್ಯೆ ಹೆಚ್ಚಾಗಿ ವಾಸಿಸುವ, ವಲಸೆ ಮತ್ತು ಭೂಮಿ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರದಲ್ಲಿ 1655 ಮತ್ತು ನಗರ ಪ್ರದೇಶದಲ್ಲಿ 2589 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ರಾಜ್ಯ ಸರ್ಕಾರ ಅಂಗನವಾಡಿಗಳಿಗೆ 268.98 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಪ್ರಾರಂಭಿಸಲಾಗುವುದು. ಕರ್ನಾಟಕ ಅಂಗನವಾಡಿ ಮತ್ತು ಪೋಷಣ್ ಅಭಿಯಾನ 2.0 ಎಂದು ಮರು ನಾಮಾಂಕಿತಗೊಂಡಿರುವ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯಡಿಯಲ್ಲಿ ಅಂಗನವಾಡಿ ಪ್ರಾರಂಭವಾಗಲಿದೆ.

ಅಂಗನವಾಡಿ ಮತ್ತು ಪೋಷಣ್ ಅಭಿಯಾನ 2.0 ಎಂದು ಮರುನಾಮಾಂಕಿತಗೊಂಡಿರುವ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನಲ್ಲಿ 100 ಅಂಗನವಾಡಿ ಕೇಂದ್ರಗಳೊಂದಿಗೆ ದಿನಾಂಕ: 2-10-1975 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರಾರಂಭಿಸಲಾಯಿತು. ಸದರಿ ಯೋಜನೆಯನ್ನು ನಂತರದ ವರ್ಷಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗಿದ್ದು, ಪ್ರಸ್ತುತ ಒಟ್ಟು 204 ಯೋಜನೆಗಳಿದ್ದು, ರಾಜ್ಯದ ಗಣನೀಯ ಪ್ರದೇಶಗಳನ್ನು ಒಳಗೊಂಡಿದೆ.

ಈ ಯೋಜನೆಯಡಿ ಒಟ್ಟು 66,361 ಅಂಗನವಾಡಿ ಕೇಂದ್ರಗಳು ಸ್ಥಾಪಿತವಾಗಿದ್ದು, ಅವುಗಳ ಮೂಲಕ ರಾಜ್ಯದ ಮಕ್ಕಳಿಗೆ, ಕಿಶೋರಿಯರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಭಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಪೌತ್ಮಿಕತೆ ಮತ್ತು ಆರೋಗ್ಯ ಶಿಕ್ಷಣ ಮುಂತಾದ 6 ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಸರ್ಕಾರದ ಪ್ರಕಟನೆಯಲ್ಲಿ ತಿಳಿಸಲಾಗಿದೆ.




ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ 4,244  ಹೊಸ ಅಂಗನವಾಡಿ ಕೇಂದ್ರಗಳನ್ನು ರಾಜ್ಯದ ಅನುದಾನದಲ್ಲಿ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 76ನೇ  ವರ್ಷದ ಸ್ವಾತಂತ್ರೋತ್ಸವ ಭಾಷಣದಲ್ಲಿ, ರಾಜ್ಯದಲ್ಲಿ 4,050 ಹೊಸ ಅಂಗನವಾಡಿ ಕೇಂದ್ರಗಳನ್ನು ಅವಶ್ಯಕತೆ ಆಧಾರದ ಮೇಲೆ ಪ್ರಾರಂಭಿಸುವ ಉದ್ದೇಶ ಹೊಂದಿರುವುದಾಗಿ ಘೋಷಿಸಿದ್ದರು.

ಅದರಂತೆ, ವಲಸೆ ಮತ್ತು  ಭೂಮಿ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರ ಪ್ರದೇಶದಲ್ಲಿ 1,655 ಮತ್ತು ನಗರ ಪ್ರದೇಶದಲ್ಲಿ 2,589 ಸೇರಿದಂತೆ ಒಟ್ಟು 4,244 ಅಂಗನವಾಡಿ ಕೇಂದ್ರಗಳನ್ನು ರೂ. 26,898.17 ವಾರ್ಷಿಕ ವೆಚ್ಚದಲ್ಲಿ ಪ್ರಾರಂಭಿಸಲು 2022-23ನೇ ಸಾಲಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Leave A Reply

Your email address will not be published.