‘ಸಾಯಿಬಾಬಾ 3 ನೇ ಅವತಾರ’ ಎಂದು ಹೇಳಿ ಜನರಿಗೆ ಮಹಾಮೋಸ ಮಾಡಿದ ವ್ಯಕ್ತಿ | ಭಾರೀ ಹಣದೊಂದಿಗೆ ಎಸ್ಕೇಪ್

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಹುಟ್ಟುತ್ತಲೇ ಇರುತ್ತಾರೆ ಎಂಬುದಕ್ಕೆ ನಮಗೆ ದಿನದಿಂದ ದಿನಕ್ಕೆ ಹೊಸ ಹೊಸ ನಿದರ್ಶನಗಳು ದೊರೆಯುತ್ತದೆ. ಅದರಲ್ಲೂ ಈ ದೇವರು, ಪವಾಡ ಎಂದು ಹೇಳಿಕೊಂಡು ವಂಚಿಸುವವರ ಸಂಖ್ಯೆ ನಿಜಕ್ಕೂ ಹೆಚ್ಚು. ಈಗ ಇಂತದ್ದೇ ಒಂದು ಘಟನೆ ನಡೆದಿದೆ. ತಾನು
ಸಾಯಿಬಾಬಾ 3ನೇ ಅವತಾರ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ಈಗ ಪೊಲೀಸರ ಪಾಲಾಗಿದ್ದಾನೆ. ಈತನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿ ಕೇಸು ಜಡಿದಿದ್ದಾರೆ.

8 ತಿಂಗಳ‌ ಹಿಂದೆ, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಅಕಾರಾಂ ಸರಗಾರ್ ಚನ್ನಪಟ್ಟಣಕ್ಕೆ ಬಂದಿದ್ದು, ಅಲ್ಲೇ ತನ್ನ ಜಾಂಡಾ ಊರಿದ್ದಾನೆ. ಹೊಟ್ಟೆಪಾಡಿಗಾಗಿ ಜನರನ್ನು ಬಾಬಾ ವೇಷ ಹಾಕಿ ಮೋಸ ಮಾಡೋಕೆ ಸಜ್ಜಾಗಿದ್ದು, ತನ್ನ ಅಸಲಿ ವೇಷ ಕಳಚಿಟ್ಟು, ನಕಲಿ ವೇಷ ಧರಿಸಿ ಬಿಟ್ಟಿದ್ದಾನೆ. ಅದುವೇ ಸಾಯಿ ಬಾಬಾ ವೇಷ. ನಂತರ, ತಾನು ಪ್ರೇಮ ಸಾಯಿ, ದೇವ ಮಾನವ ಎಲ್ಲರ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಹೇಳಿಕೊಂಡು ಜನರನ್ನು ನಂಬಿಸೋಕೆ ಶುರು ಮಾಡಿದ್ದಾನೆ. ಸಿಂಧೂ ಎಂಬುವವರ ತೋಟದ ಮನೆಯಲ್ಲಿ ಪ್ರತಿನಿತ್ಯ ಭಜನೆ, ಪೂಜೆ ಮಾಡಿ ಹಣ ವಸೂಲಿ ಮಾಡುತ್ತಿದ್ದನು. ಜನ ಈತನನ್ನು ನಂಬಿದ್ದಾರೆ ಕೂಡಾ. ಆದರೆ ನಕಲಿ ಮೋಸದಾಟ ಒಂದಲ್ಲ ಒಂದು ದಿನ ಕಳಚಲೇ ಬೇಕಲ್ವೇ. ಹಾಗಾಗಿ ಈತನ ಮೇಲೆ ವಂಚನೆ ಆರೋಪ ಬಂತು.

ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಹೆಸರಲ್ಲಿ ಇಲ್ಲಿಯವರೆಗೂ ಆರೋಪಿ ಸುಮಾರು 1.5 ಕೋಟಿ ರೂ. ಹಣ ವಂಚನೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ನಂತರ ತೋಟದ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಡುವಂತೆ ಸಿಂಧೂ ಅವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಬೇಸತ್ತು ಮಹಿಳೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದು, ಪ್ರಕರಣ ಸಂಬಂಧ 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಸಚಿನ್ ಅಕಾರಾಂ ಸರಗಾರ್ ಸಹಕರಿಸುತ್ತಿದ್ದ ವಿನಾಯಕ ರಾಜ್, ಸಾಯಿರಾಜ್, ಜಯಂತ್, ಯಶೋದಮ್ಮ, ಉಮಾಶಂಕರ್, ಪ್ರಶಾಂತ್ ಎನ್ನುವರರ ವಿರುದ್ಧ ಕೂಡ ದೂರು ದಾಖಲಾಗಿದೆ. ಸದ್ಯ ಹಣದ ಜೊತೆಗೆ ಎಸ್ಕೇಪ್ ಆಗಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.