ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡ ಭಾರತ ; ಮೋದಿ ಲೋಕಾರ್ಪಣೆಗೊಳಿಸಿದ ‘INS ವಿಕ್ರಾಂತ್’ ವಿಶೇಷತೆ ಏನು ಗೊತ್ತಾ?
ಇಂದು ಭಾರತೀಯ ನೌಕಾಪಡೆಗೆ ಬಹಳ ವಿಶೇಷವಾದ ದಿನವಾಗಿದ್ದು, ನೌಕಾಪಡೆಗೆ ಸ್ವದೇಶಿ ‘ಐಎನ್ಎಸ್ ವಿಕ್ರಾಂತ್’ ಸೇರ್ಪಡೆಯ ಮೂಲಕ ಭಾರತ ಹೊಸದೊಂದು ಇತಿಹಾಸ ಬರೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ‘ಐಎನ್ಎಸ್ ವಿಕ್ರಾಂತ್’ ಅನ್ನು ಲೋಕಾರ್ಪಣೆಗೊಳಿಸಿದರು.
ಇಂದು ದೇಶೀಯವಾಗಿಯೇ ನಿರ್ಮಿಸಲಾದ ಯುದ್ಧ ವಿಮಾನಗಳನ್ನು (Fighter Plane) ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಯುದ್ಧನೌಕೆ ಅಥವಾ ಏರ್ಕ್ರಾಫ್ಟ್ ಕ್ಯಾರಿಯರ್ ಆಗಿರುವ ಐಎನ್‌ಎಸ್ ವಿಕ್ರಾಂತ್ (INS Vikrant) ಯುದ್ಧ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೊಚ್ಚಿಯ ಶಿಪ್ ಯಾರ್ಡ್ನಲ್ಲಿ ಅನಾವರಣಗೊಳಿಸಿದ್ದಾರೆ. ಅಂದರೆ ಇಂದಿನಿಂದ ಈ ಏರ್ಕ್ರಾಫ್ಟ್ ಕ್ಯಾರಿಯರ್ ಭಾರತೀಯ ಸೇನೆಗಾಗಿ ಕಾರ್ಯಾರಂಭ ಮಾಡಲಿದೆ. ವಿಕ್ರಾಂತ್ ಎಂದರೆ ವಿಜಯಶಾಲಿ ಮತ್ತು ಧೀರ ಎಂದರ್ಥ. ಈ ಮೂಲಕ ಭಾರತ ತನ್ನ ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ಇದು ಭಾರತದ ಮಹತ್ವದ ಮೈಲಿಗಲ್ಲು. ಈ ಯುದ್ಧನೌಕೆಯನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಉಕ್ಕು ಸೇರಿದಂತೆ ಕಚ್ಚಾವಸ್ತು ಹಾಗೂ ಬಿಡಿಭಾಗಗಳನ್ನು ಬಳಸುವಾಗಲೂ ದೇಶೀಯ ಕಂಪನಿಗಳಿಗೇ ಆದ್ಯತೆ ನೀಡಲಾಗಿದೆ. ಜಗತ್ತಿನ ಕೆಲವೇ ದೇಶಗಳಿಗೆ ಸ್ವತಂತ್ರವಾಗಿ ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ವಿಕ್ರಾಂತ್ ಮೂಲಕ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಿದೆ. ಕೇರಳದಲ್ಲಿ ಪವಿತ್ರ ಓಣಂ ಹಬ್ಬದ ದಿನ ಈ ಸಾಧನೆ ಸಾಧ್ಯವಾಗಿದೆ. ಸ್ವಾವಲಂಬನೆಯ ಆಶಯವನ್ನು ವಿಕ್ರಾಂತ್ ಯುದ್ಧನೌಕೆ ಈಡೇರಿಸಿದೆ ಎಂದು ಹೇಳಿದರು.
ಐಎನ್ಎಸ್ ವಿಕ್ರಾಂತ್ ಕೇವಲ ಹಡಗಷ್ಟೇ ಅಲ್ಲ, ಅದೊಂದು ತೇಲುವ ವಾಯುನೆಲೆಯೂ ಹೌದು. ಈ ಯುದ್ಧ ನೌಕೆ 13 ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಇದರಲ್ಲಿ ಉತ್ಪತ್ತಿಗುವ ವಿದ್ಯುತ್ನಿಂದ 5,000 ಮನೆಗಳಿಗೆ ಬೆಳಕು ಕೊಡಬಹುದು. ಇದು ನಮ್ಮ ದೇಶದ ಸ್ವಾವಲಂಬನೆಯ ಪ್ರತೀಕ. ಭಾರತೀಯ ನೌಕಾಪಡೆಯು ವಿವಿಧ ಹಂತಗಳಲ್ಲಿ ಮಹಿಳೆಯರ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ ಎಂದು ಮೋದಿ ನುಡಿದರು.
ಈ ಏರ್ಕ್ರಾಫ್ಟ್ ಕ್ಯಾರಿಯರ್ ಅನ್ನುವುದು ಸಮುದ್ರದಲ್ಲಿ ಕಂಡುಬರುವ ಅತಿ ಪ್ರಬಲ ಯುದ್ಧ ನೌಕೆಯಾಗಿದ್ದು, ಜಗತ್ತಿನಲ್ಲಿ ಭಾರತವೂ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ಬಲಾಢ್ಯ ರಾಷ್ಟ್ರಗಳಷ್ಟೇ ಮಾತ್ರ ಇವುಗಳನ್ನು ಹೊಂದಿದೆ. ಇದರ ವಿಶೇಷತೆ ಎಂದರೆ, ಹೆಸರೇ ಸೂಚಿಸುವಂತೆ ಈ ಬೃಹತ್ ಹಡಗಿನಿಂದಲೇ ಯುದ್ಧ ವಿಮಾನಗಳ ಕಾರ್ಯಾಚರಣೆ ಮಾಡಲು ಸಾಮರ್ಥ್ಯವಿರುತ್ತದೆ. ಇದೊಂದು ಸಮುದ್ರದಲ್ಲಿ ಏರ್ ಬೇಸ್ ಇದ್ದಂತೆ. ಭಾರತೀಯ ಸೇನೆಯ ಅಂಗವಾದ ವಾರ್ಶಿ ಡಿಸೈನ್ ಬ್ಯೂರೋ (WDB) ದಿಂದ ದೇಶೀಯವಾಗಿ ಈ ಹಡಗಿನ ವಿನ್ಯಾಸ ಮಾಡಲಾಗಿದ್ದು ಇದನ್ನು ಅತ್ಯಾಧುನಿಕ ಉಪಕರಣಗಳು ಹಾಗೂ ತಂತ್ರಜ್ಞಾನದೊಂದಿಗೆ ಪಬ್ಲಿಕ್ ಸೆಕ್ಟರ್ ಸಂಸ್ಥೆಯಾದ ಕೊಚ್ಚಿ ಯಾರ್ಡ್ ಶಿಪ್ನಿಂದ ನಿರ್ಮಿಸಲಾಗಿದೆ. ಇದು ಭಾರತದ ಸೇನೆಯ ಇತಿಹಾಸದಲ್ಲೇ ಇಲ್ಲಿಯವರೆಗೂ ನಿರ್ಮಿಸಲಾದ ಅತಿ ದೊಡ್ಡ ಯುದ್ಧ ನೌಕೆಯಾಗಿದೆ.
ಐಎನ್‍ಎಸ್ ವಿಕ್ರಾಂತ್ 62 ಮೀಟರ್ ಮತ್ತು 59 ಮೀಟರ್ ಎತ್ತರದ ಬೀಮ್ ಹೊಂದಿದ್ದು ಇದರಲ್ಲಿ 14 ಡೆಕ್‌ಗಳಿವೆ, ಐದು ಸೂಪರ್‌ಸ್ಟ್ರಕ್ಚರ್‌ಗಳು ಮತ್ತು 2,300 ಕಂಪಾರ್ಟ್‌ಮೆಂಟ್‌ಗಳು, 1,700 ಸಿಬ್ಬಂದಿ ಸಾಮರ್ಥ್ಯವಿದ್ದು ಮಹಿಳಾ ಅಧಿಕಾರಿಗಳಿಗಾಗಿ ವಿಶೇಷ ಕ್ಯಾಬಿನ್‌ಗಳನ್ನೂ ಸಹ ಇದು ಹೊಂದಿದೆ.
ಈ ಹಡಗು ಏರ್‌ಕ್ರಾಫ್ಟ್ ಲಿಫ್ಟ್‌ಗಳನ್ನು ಹೊಂದಿದೆ (ಹ್ಯಾಂಗರ್‌ನಿಂದ ಡೆಕ್‌ಗೆ ಜೆಟ್‌ಗಳನ್ನು ತೆಗೆದುಕೊಂಡು ಹೋಗಲು) ಪ್ರತಿಯೊಂದೂ 30 ಟನ್‌ಗಳಷ್ಟು ಸಾಗಿಸುವ ಸಾಮರ್ಥ್ಯ ಹೊಂದಿವೆ. ಡೆಕ್ ಗಳನ್ನು ಹಾರಾಟದ ಕಾರ್ಯಾಚರಣೆಗಳ ಸಂದರ್ಭದಲ್ಲಿ ಯಾವುದೇ ಅಡಚಣೆಗಳುಂಟಾಗದಂತೆ ವಿನ್ಯಾಸಗೊಳಿಸಲಾಗಿದೆ ಹಾಗೂ ಇದರ ಡಿಸ್ಪ್ಲೇಸ್ಮೆಂಟ್ 43,000 ಟನ್‌ಗಳಷ್ಟಿದ್ದು ಇದು ಗರಿಷ್ಠ 28 ನಾಟ್ ಗಳಷ್ಟು ವೇಗದಲ್ಲಿ ಚಲಿಸಬಹುದಾಗಿದೆ. ಇದರ ಕಾರ್ಯಾಚರಣೆಯ ವ್ಯಾಪ್ತಿಯ ಶ್ರೇಣಿಯು 7500 ನಾಟಿಕಲ್ ಮೈಲುಗಳಷ್ಟಾಗಿದೆ.
“ವಿಕ್ರಾಂತ್ ಒಂದು ಅದ್ಭುತವಾಗಿದೆ. ಇದು ಭಾರತ ಇದುವರೆಗೆ ತಯಾರಿಸಿದ ಯಾವುದೇ ಯುದ್ಧನೌಕೆಗಿಂತ ಐದರಿಂದ ಏಳು ಪಟ್ಟು ದೊಡ್ಡದಾಗಿದೆ” ಎಂದು ಸಿಎಸ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ನಾಯರ್ ದಿ ಟ್ರಿಬ್ಯೂನ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸುಮಾರು 20,000 ಕೋಟಿ ಬಜೆಟ್‌ನಲ್ಲಿ ತಯಾರಿಸಲಾಗಿರುವ ಈ ಯುದ್ಧನೌಕೆಯ ಸುಮಾರು 76 ಪ್ರತಿಶತದಷ್ಟು ಭಾಗವನ್ನು ಭಾರತದ ಉಪಕರಣಗಳು ಮತ್ತು ಮಾನವಸಂಪನ್ಮೂಲಗಳನ್ನೇ ಬಳಸಿ ನಿರ್ಮಿಸಲಾಗಿದೆ.
ಇದರಲ್ಲಿ 23,000 ಟನ್ ಉಕ್ಕು, 2,500 ಕಿಮೀ ವಿದ್ಯುತ್ ಕೇಬಲ್‌ಗಳು, 150 ಕಿಮೀ ಪೈಪ್‌ಗಳು ಮತ್ತು 2,000 ವಾಲ್ವ್‌ಗಳು ಮತ್ತು ರಿಜಿಡ್ ಹಲ್ ಬೋಟ್‌ಗಳು, ಗ್ಯಾಲಿ ಉಪಕರಣಗಳು, ಹವಾನಿಯಂತ್ರಣ ಮತ್ತು ಶೈತ್ಯೀಕರಣ ಘಟಕಗಳು ಮತ್ತು ಸ್ಟೀರಿಂಗ್ ಗೇರ್ ಸೇರಿದಂತೆ ವ್ಯಾಪಕ ಶ್ರೇಣಿಯ ಸಿದ್ಧಪಡಿಸಿದ ಉತ್ಪನ್ನಗಳು ಸೇರಿವೆ.
ಈ ಹಡಗನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಯಂತ್ರೋಪಕರಣಗಳ ಕಾರ್ಯಾಚರಣೆಗಳು, ಹಡಗು ಸಂಚರಣೆ ಮತ್ತು ಬದುಕುಳಿಯುವಿಕೆಗಾಗಿ ಹೆಚ್ಚಿನ ಮಟ್ಟದ ಸುರಕ್ಷತಾ ಕ್ರಮಗಳನ್ನೊಳಗೊಂಡ ಯಾಂತ್ರೀಕರಣದೊಂದಿಗೆ ನಿರ್ಮಿಸಲಾಗಿದೆ. ವಿಕ್ರಾಂತ್ ಏರ್ ಕ್ರಾಫ್ಟರ್ ಇತ್ತೀಚಿನ ಅತ್ಯಾಧುನಿಕ ಉಪಕರಣಗಳು ಮತ್ತು ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದೆ.
ಈ ಯುದ್ಧನೌಕೆಯು ಪ್ರಮುಖ ಮಾಡ್ಯುಲರ್ ಓಟಿ, ತುರ್ತು ಮಾಡ್ಯುಲರ್ ಒಟಿ, ಫಿಸಿಯೋಥೆರಪಿ ಕ್ಲಿನಿಕ್, ಐಸಿಯು, ಪ್ರಯೋಗಾಲಯಗಳು, ಸಿಟಿ ಸ್ಕ್ಯಾನರ್, ಎಕ್ಸ್-ರೇ ಯಂತ್ರಗಳು, ದಂತ ಸಂಕೀರ್ಣಗಳು, ಐಸೋಲೇಶನ್ ವಾರ್ಡ್ ಮತ್ತು ಟೆಲಿಮೆಡಿಸಿನ್ ಸೌಲಭ್ಯಗಳು ಸೇರಿದಂತೆ ಇತ್ತೀಚಿನ ವೈದ್ಯಕೀಯ ಉಪಕರಣಗಳ ಸೌಲಭ್ಯಗಳೊಂದಿಗೆ ಇದು ಸಂಪೂರ್ಣ ಅತ್ಯಾಧುನಿಕ ವೈದ್ಯಕೀಯ ಸಂಕೀರ್ಣವನ್ನು ಸಹ ಹೊಂದಿದೆ. ಐಎನ್‍ಎಸ್ ವಿಕ್ರಾಂತ್, ಎರಡು ಟೇಕ್-ಆಫ್ ರನ್‌ವೇಗಳನ್ನು ಹೊಂದಿದ್ದು ಇದರಲ್ಲಿ ಸ್ಕೀ-ಜಂಪ್ ರಾಂಪ್ ತಂತ್ರಜ್ಞಾನ, ಮೂರು ಅರೆಸ್ಟರ್ ವೈರ್ ಗಳನ್ನು ಹೊಂದಿರುವ ಲ್ಯಾಂಡಿಂಗ್ ಸ್ಟ್ರಿಪ್, ಶಾರ್ಟ್ ಟೇಕ್-ಆಫ್, ಅರೆಸ್ಟೆಡ್ ಲ್ಯಾಂಡಿಂಗ್ (STOBAR) ಗಳಂತಹ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸಲಾಗಿದೆ.
ದಿ ಟ್ರಿಬ್ಯೂನ್ ಪ್ರಕಾರ, ವಿಕ್ರಾಂತ್ ಹಡಗಿನ ಕೆಲವು ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ದೀರ್ಘ ವ್ಯಾಪ್ತಿಯುಳ್ಳ ಹಾಗೂ ಮೇಲ್ಮೈಯಿಂದ ಗಾಳಿಗೆ ಹಾರಿ ದಾಳಿ ಮಾಡುವ ಕ್ಷಿಪಣಿಗಳು (LRSAM) ಇಸ್ರೇಲಿ ಮೂಲದ್ದಾಗಿದ್ದು, ರಷ್ಯಾ ವಾಯುಯಾನ ಸಂಕೀರ್ಣ ಮತ್ತು MiG 29-K ಜೆಟ್‌ಗಳನ್ನು ಪೂರೈಸಿದೆ.
ಇದರಲ್ಲಿನ ಪ್ರೊಪಲ್ಷನ್ ಸಿಸ್ಟಮ್ನ ಏಕೀಕರಣವನ್ನು ಇಟಾಲಿಯನ್ ಫಿನ್ಕಾಂಟಿಯೆರಿ ಮಾಡಿದೆ. ಹಡಗಿನ ನಾಲ್ಕು ಎಂಜಿನ್‌ಗಳು, LM 2500 ಗ್ಯಾಸ್ ಟರ್ಬೈನ್‌ಗಳು ಅಮೆರಿಕದ ಕಂಪನಿಯಾದ ಜನರಲ್ ಎಲೆಕ್ಟ್ರಿಕ್‌ನಿಂದ ಬಂದಿವೆ, ಆದರೆ HAL ಸಂಸ್ಥೆಯು ಆ ಇಂಜಿನ್‌ಗಳ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಗಳ ಏಕೀಕರಣವು ಸ್ಥಳೀಯ ಯುದ್ಧ ನಿರ್ವಹಣಾ ವ್ಯವಸ್ಥೆ (CMS) ಮೂಲಕ ಮಾಡಲಾಗುತ್ತದೆ.