‘CET’ ಅಭ್ಯರ್ಥಿಗಳೇ ಗಮನಿಸಿ : ದಾಖಲಾತಿ ಪರಿಶೀಲನೆಗೆ ಅವಕಾಶ ವಿಸ್ತರಣೆ
ಮಳೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಗೊಂಡಿರುವ ಕಾರಣ, ಸಿಇಟಿ ಬರೆದಿರುವ ಅಭ್ಯರ್ಥಿಗಳಿಗೆ ಕೆಲವು ಆನ್ ಲೈನ್ ದಾಖಲಾತಿಗಳನ್ನು ಸರಿಯಾಗಿ ನಮೂದಿಸಲು ಮತ್ತಷ್ಟು ಕಾಲಾವಕಾಶ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಅವರು, ಹಲವು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಈ ಕಾಲಾವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇದರಂತೆ ಶಾಲಾ ವ್ಯಾಸಂಗದ ವಿವರಗಳನ್ನು ಮೊದಲು ಅಪೂರ್ಣವಾಗಿ ತುಂಬಿರುವವರು ಸರಿಯಾದ ವಿವರಗಳನ್ನು ತುಂಬಲು ಸೆ.1ರಿಂದ 7ರವರೆಗೆ ಪ್ರತಿದಿನ ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 8ರವರೆಗೆ (ಭಾನುವಾರ ಪೂರ್ತಿ ದಿನ) ಅವಕಾಶ ಇರಲಿದೆ. ಇದು ಈವರೆಗೂ ಶಾಲಾ ದಾಖಲಾತಿ ಪರಿಶೀಲನೆ ಆಗದಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ ಆಗಲಿದೆ.
ಹಾಗೆಯೇ, ಶಾಲಾ ವಿವರಗಳು ಮತ್ತು ಜಿಲ್ಲಾ/ತಾಲ್ಲೂಕು ವಿವರಗಳನ್ನು ತುಂಬದೆ ಇದ್ದಲ್ಲಿ ಅಂಥವರಿಗೆ ಇದಕ್ಕೆ ಆಯಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇದನ್ನು ಸರಿಪಡಿಸಿಕೊಳ್ಳಲು ಸೆ.7ರವರೆಗೆ ಅವಕಾಶ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದೆರಡು ವರ್ಷಗಳ ಶಾಲಾ ವಿವರಗಳನ್ನು ತಪ್ಪಾಗಿ ನಮೂದಿಸಿರುವವರಿಗೆ ಸೆ.8ರ ಬಳಿಕ ಅವಕಾಶ ಕೊಡಲಾಗುವುದು. ಜತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಂಥವರು ಸೆ.3ರ ಬೆಳಿಗ್ಗೆ 8ರಿಂದ ಸೆ.5ರ ಸಂಜೆ 5 ಗಂಟೆಯ ಒಳಗೆ ಅದನ್ನು ಸರಿಪಡಿಸಿ ಕೊಳ್ಳಬಹುದು ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.